ADVERTISEMENT

VP Election: ರಾಧಾಕೃಷ್ಣನ್‌ಗೆ ಬೆಂಬಲ ಕೋರಿ ಸ್ಟಾಲಿನ್‌ಗೆ ಕರೆ ಮಾಡಿದ ಸಿಂಗ್

ಇ.ಟಿ.ಬಿ ಶಿವಪ್ರಿಯನ್‌
Published 18 ಆಗಸ್ಟ್ 2025, 11:19 IST
Last Updated 18 ಆಗಸ್ಟ್ 2025, 11:19 IST
<div class="paragraphs"><p>ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು&nbsp;ರಕ್ಷಣಾ ಸಚಿವ ರಾಜನಾಥ ಸಿಂಗ್</p></div>

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್

   

–ಪಿಟಿಐ ಚಿತ್ರ

ಚೆನ್ನೈ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ಬೆಂಬಲಿಸುವಂತೆ ಕೋರಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

‘ಉಪರಾಷ್ಟ್ರಪತಿ ಚುನಾವಣೆ ಕುರಿತು ರಾಜನಾಥ ಸಿಂಗ್ ಅವರು ಸ್ಟಾಲಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.‌ ಆದರೆ, ತಮಿಳುನಾಡು ಮೂಲದ ‘ಸಿಪಿಆರ್’ ಎಂದು ಕರೆಯುವ ರಾಧಾಕೃಷ್ಣನ್ ಅವರನ್ನು ಬೆಂಬಲಿಸುವ ಬಗ್ಗೆ ಡಿಎಂಕೆ ಯಾವುದೇ ಆಶ್ವಾಸನೆ ನೀಡಿಲ್ಲ. ಆದಾಗ್ಯೂ, ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ಬೆಂಬಲ ಪಡೆಯಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ’ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ.

ಸಿ.ಪಿ. ರಾಧಾಕೃಷ್ಣನ್ ಅವರು ತಮಿಳುನಾಡಿನ ಕೊಯಮತ್ತೂರಿನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ನಾಯಕತ್ವದಡಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಅಚ್ಚರಿ ಎಂಬಂತೆ ಸಿ.ಪಿ. ರಾಧಾಕೃಷ್ಣನ್ ಅವರು ಆಗಸ್ಟ್ 11ರಂದು ಸ್ಟಾಲಿನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಸ್ಟಾಲಿನ್ ಮತ್ತು ರಾಧಾಕೃಷ್ಣನ್ ಅವರ ನಡುವೆ ಉತ್ತಮ ಒಡನಾಟ ಇರುವ ಕಾರಣದಿಂದಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ಕೋರಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಸೇರಿದಂತೆ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರು ರಾಧಾಕೃಷ್ಣನ್ ಅವರ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆಸಿದೆ.

ಈಚೆಗೆ ಸುದ್ದಿಗಾರರರೊಂದಿಗೆ ಮಾತನಾಡಿದ್ದ ಪಳನಿಸ್ವಾಮಿ, ‘ತಮಿಳುನಾಡಿನ ಎಲ್ಲಾ ಸಂಸದರು ಪಕ್ಷಾತೀತವಾಗಿ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅವರನ್ನು ಬೆಂಬಲಿಸಬೇಕು’ ಎಂದು ಕರೆ ನೀಡಿದ್ದರು.

ಜಗದೀಪ್ ಧನಕರ್ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಉಪರಾಷ್ಟ್ರಪತಿ ಹುದ್ದೆ ತೆರವಾಗಿತ್ತು. ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ಆಗಸ್ಟ್ 22 ಕೊನೆಯ ದಿನಾಂಕ ಆಗಿದೆ.

ಎನ್‌ಡಿಎ ಮೈತ್ರಿಕೂಟವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವುದರಿಂದ ರಾಧಾಕೃಷ್ಣನ್‌ ಆಯ್ಕೆ ಬಹುತೇಕ ಖಚಿತವಾಗಿದೆ. ಅವರ ಆಯ್ಕೆಯು ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಪಕ್ಷಕ್ಕೆ ಬಲ ತುಂಬಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ರಾಧಾಕೃಷ್ಣನ್ ಅವರು ತಮಿಳುನಾಡಿನಲ್ಲಿ ಪ್ರಭಾವಿ ಗೌಂಡರ್ ಜಾತಿಗೆ ಸೇರಿದವರು. ಇದು ಒಬಿಸಿ ಸಮುದಾಯವಾಗಿದೆ.

ಉಪರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟವು ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.