ADVERTISEMENT

ಡ್ರೋನ್‌, ಸೆನ್ಸಾರ್‌ಗಳು ಯುದ್ಧದ ಸ್ವರೂಪ ಬದಲಿಸಿವೆ: ರಾಜನಾಥ ಸಿಂಗ್

ಪಿಟಿಐ
Published 29 ಸೆಪ್ಟೆಂಬರ್ 2025, 14:47 IST
Last Updated 29 ಸೆಪ್ಟೆಂಬರ್ 2025, 14:47 IST
<div class="paragraphs"><p>ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿಯಲ್ಲಿ ಕಮಾಂಡರ್‌ಗಳ ಜತೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸೋಮವಾರ ಸಭೆ ನಡೆಸಿದರು</p></div>

ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿಯಲ್ಲಿ ಕಮಾಂಡರ್‌ಗಳ ಜತೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸೋಮವಾರ ಸಭೆ ನಡೆಸಿದರು

   

ಪಿಟಿಐ ಚಿತ್ರ

ನವದೆಹಲಿ: ‘ಉಪಗ್ರಹಗಳು, ಡ್ರೋನ್‌ ಹಾಗೂ ಸೆನ್ಸರ್‌ಗಳು ಯುದ್ಧದ ಸ್ವರೂಪ ಕುರಿತ ವ್ಯಾಖ್ಯಾನವನ್ನೇ ಬದಲಿಸಿವೆ. ಈಗಿನ ಯುದ್ಧದ ತೀವ್ರತೆ ಅಳೆಯಲು ತಿಂಗಳುಗಳು ಬೇಕಿಲ್ಲ, ಕೆಲವೇ ಗಂಟೆ–ಸೆಕೆಂಡ್‌ಗಳು ಸಾಕು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.

ADVERTISEMENT

ಇದೇ ವೇಳೆ, ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉತ್ತಮ ಕಾರ್ಯಸೂಚಿ ರೂಪಿಸಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವಂತೆಯೂ ಭಾರತೀಯ ಕರಾವಳಿ ಕಾವಲು ಪಡೆಗಳಿಗೆ (ಐಸಿಜಿ) ರಾಜನಾಥ ಕರೆ ನೀಡಿದ್ದಾರೆ. 

ಇಲ್ಲಿರುವ ಐಸಿಜಿ ಕೇಂದ್ರ ಕಚೇರಿಯಲ್ಲಿ ನಡೆದ 42ನೇ ಐಸಿಜಿ ಕಮಾಂಡರ್ ಸಮಾವೇಶದಲ್ಲಿ ರಾಜನಾಥ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ‘ಸೈಬರ್‌ ಹಾಗೂ ಎಲೆಕ್ಟ್ರಾನಿಕ್‌ ಯುದ್ಧವು ಈಗ ಕಾಲ್ಪನಿಕ ಬೆದರಿಕೆಯಾಗಿ ಉಳಿದಿಲ್ಲ, ವಾಸ್ತವದಲ್ಲಿ ಕಾಡುತ್ತಿದೆ’ ಎಂದರು.

‘ಭಾರತದ ವ್ಯವಸ್ಥೆಗೆ ಧಕ್ಕೆ ತರಲು ಕೆಲವು ದೇಶಗಳು ಕ್ಷಿಪಣಿ ಮೂಲಕ ದಾಳಿ ನಡೆಸದೆ ಹ್ಯಾಕಿಂಗ್‌, ಸೈಬರ್‌ ದಾಳಿಗಳಿಗೆ ಮುಂದಾಗುವ ಸಾಧ್ಯತೆ ಇದೆ. ಇಂತಹ ಪ್ರಯತ್ನಗಳಿಗೆ ತಿರುಗೇಟು ನೀಡಲು ಐಸಿಜಿ ತನ್ನ ತರಬೇತಿ ಹಾಗೂ ಪರಿಕರಗಳಲ್ಲಿ ಅತ್ಯಾಧುನಿಕತೆ ಅಳವಡಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವ್ಯವಸ್ಥೆ, ಸ್ವಯಂಚಾಲಿತ ಕಣ್ಗಾವಲು ವ್ಯವಸ್ಥೆ, ಸದಾ ಸನ್ನದ್ಧರಾಗಿರುವುದು ಅಗತ್ಯವಾಗಿದೆ’ ಎಂದಿದ್ದಾರೆ.

‘ಮುಂದಿನ ತಿರುಗೇಟು ಇನ್ನೂ ಭೀಕರ’

ಚಂಡೀಗಢ: ‘ಆಪರೇಷನ್ ಸಿಂಧೂರದ ವೇಳೆ ಡ್ರೋನ್‌ ಬಳಕೆಗಳ ಕಾರ್ಯತಂತ್ರದ ಮೂಲಕ ವಿವಿಧ ವಿಚಾರಗಳನ್ನು ಅರಿತುಕೊಂಡು ಇದೀಗ ಡ್ರೋನ್‌ ಯುದ್ಧದ ತರಬೇತಿಯನ್ನು ಮತ್ತಷ್ಟು ಬಲಗೊಳಿಸಿದ್ದೇವೆ. ಹೀಗಾಗಿ ಶತ್ರುಗಳಿಗೆ ಇನ್ನು ಮುಂದೆ ನಾವು ನೀಡಲಿರುವ ತಿರುಗೇಟು ಈ ಹಿಂದಿಗಿಂತಲೂ ಭೀಕರವಾಗಿರಲಿದೆ’ ಎಂದು ಪಶ್ಚಿಮ ಕಮಾಂಡ್‌ನ ಕಮಾಂಡಿಂಗ್ –ಇನ್‌–ಚೀಫ್‌ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಕಟಿಯಾರ್‌ ಎಚ್ಚರಿಸಿದ್ದಾರೆ.

ಹರಿಯಾಣದ  ಅಂಬಾಲಾ ಜಿಲ್ಲೆಯಲ್ಲಿನ ನಾರಾಯಣಗಢದ ಫೀಲ್ಡ್‌ ಫೈರಿಂಗ್ ರೇಂಜ್‌ನಲ್ಲಿ ಮಾಧ್ಯಮಗಳೊಂದಿಗೆ ಕಟಿಯಾರ್‌ ಮಾತನಾಡಿದರು. ಭವಿಷ್ಯದ ಯುದ್ಧದಲ್ಲಿ ಡ್ರೋನ್‌ಗಳಿಂದ ಎದುರಾಗಬಹುದಾದ ಅಪಾಯದ ತೀವ್ರತೆ ಎಷ್ಟಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ. ಆಪರೇಷನ್‌ ಸಿಂಧೂರದ ವೇಳೆಯೂ ಪಾಕಿಸ್ತಾನ ಸಾಕಷ್ಟು ಡ್ರೋನ್‌ ಬಳಸಿತ್ತು. ಆ ಪೈಕಿ ಬಹುತೇಕ ಡ್ರೋನ್‌ಗಳನ್ನು ನಾವು ನಾಶ ಪಡಿಸಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.