ADVERTISEMENT

ತಾಯಂದಿರ ದಿನ: 16 ಪುಷ್‌–ಅಪ್ ಮಾಡಿದ 80 ವರ್ಷದ ಮಿಲಿಂದ್ ಸೋಮನ್‌ ತಾಯಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 2:52 IST
Last Updated 13 ಮೇ 2019, 2:52 IST
   

ನವದೆಹಲಿ: ಟ್ರಯಥ್ಲಾನ್‌ನಲ್ಲಿ ವಿಶ್ವಮಟ್ಟದಲ್ಲಿ ಹೆಸರು ಗಳಿಸಿರುವ ಬಾಲಿವುಡ್ ನಟ, ರೂಪದರ್ಶಿ ಮಿಲಿಂದ್ ಸೋಮನ್‌ ಫಿಟ್‌ನೆಸ್‌ ಕಂಡು ಸ್ಫೂರ್ತಿ ಪಡೆದಿರುವವರು ಅನೇಕ. ದೇಹದ ಆರೋಗ್ಯದ ಬಗ್ಗೆ ಆಗಾಗ್ಗೆ ಸಲಹೆ ನೀಡುವ ಮಿಲಿಂದ್‌, 80 ವರ್ಷ ವಯಸ್ಸಿನ ತನ್ನ ಅಮ್ಮನ ಫಿಟ್‌ನೆಸ್‌ಗೆ ಸಾಕ್ಷಿಯಾಗಿ ವಿಡಿಯೊ ಪ್ರಕಟಸಿಕೊಂಡಿದ್ದಾರೆ. ತಾಯಂದಿರ ದಿನದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್‌ ಆಗಿದೆ.

ಅಮ್ಮನಿಗೆ ಮುತ್ತಿಡುವುದು, ಹೂ ಕೊಡುವುದು, ಸಿಹಿ ತಿನಿಸುವುದು ಅಥವಾ ಭರ್ಜರಿ ಉಡುಗೊರೆ ನೀಡಿ ಫೋಟೊ ಕ್ಲಿಕ್ಕಿಸಿಕೊಳ್ಳುವುದು, ಇಲ್ಲವೇ ನೆನಪಿನಲ್ಲಿಯೇ ಮೌನಕ್ಕೆ ಜಾರುವುದು ತಾಯಂದಿರ ದಿನ ಮಕ್ಕಳು ಸಾಮಾನ್ಯ ನಡೆಸುತ್ತಿರುವ ಆಚರಣೆ. ಆದರೆ, ಮಿಲಿಂದ್‌ ಸೋಮನ್‌ ತಾಯಿ ಮಗನೊಂದಿಗೆ ಮೈದಾನಕ್ಕಿಳಿದು ದೈಹಿಕ ಸದೃಢತೆಯ ಅನಾವರಣಗೊಳಿಸಿದ್ದಾರೆ.

80 ವರ್ಷ ವಯಸ್ಸಿನ ಹಿರಿಯ ತಾಯಿ ಹದಿನೆಂಟರ ಯುವಕ ಯುವತಿಯರನ್ನು ನಾಚಿಸುವಂತಹ ಫಿಟ್‌ನೆಸ್‌ ಸಾಮರ್ಥ್ಯ ತೋರಿದ್ದಾರೆ. ಸೀರೆಯುಟ್ಟಿದ್ದ ಉಷಾ ಸೋಮನ್‌ ಅವರು ಮಗನೊಟ್ಟಿಗೆ 16 ಪುಷ್‌–ಅಪ್‌ಗಳನ್ನು ಮಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಭಾನುವಾರ ತಾಯಂದಿರ ದಿನದಂದು ಮಿಲಿಂದ್‌ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ.

ADVERTISEMENT

ನನ್ನ ತಾಯಿ, ಉಷಾ ಸೋಮನ್‌. 80 ವರ್ಷದ ಯುವತಿ ಎಂದು ಬರೆದುಕೊಂಡಿರುವ ಮಿಲಿಂದ್‌, ಪ್ರತಿ ದಿನವನ್ನು ತಾಯಂದಿರ ದಿನವಾಗಿಸಿ ಎಂದಿದ್ದಾರೆ.

ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಉಷಾ ಸೋಮನ್ ಇಲ್ಲಿ ಸಾಕ್ಷ್ಯ ಒದಗಿಸಿದ್ದಾರೆ.

ಪುಷ್‌–ಅಪ್‌ಗಳ ನಂತರ ಮಾತನಾಡಿರುವ ಪಿಂಕಥಾನ್‌ ರಾಯಭಾರಿ, ದೇಶದ ಮೊದಲ ಸೂಪರ್‌ ಮಾಡಲ್‌ 53 ವರ್ಷದ ಮಿಲಿಂದ್‌, ’ಇದು ಎಲ್ಲ ತಾಯಂದಿರಿಗಾಗಿ ನೀಡುತ್ತಿರುವ ಸಂದೇಶ. ದಿನದಲ್ಲಿ ನಿಮಗಾಗಿ ಸ್ವಲ್ಪ ಸಮಯ ನೀಡಿ. ಐದರಿಂದ 10 ನಿಮಿಷ ಆದರೂ ಸರಿಯೇ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿ. ನೀವೆಲ್ಲರೂ ಸೂಪರ್‌ ಫಿಟ್‌ ಆಗಿರುವುದನ್ನು ಕಾಣಲು ಬಯಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು’ ಎಂದಿದ್ದಾರೆ.

45 ಸೆಕೆಂಡ್‌ಗಳ ಈ ವಿಡಿಯೊ 1.50 ಲಕ್ಷಕ್ಕೂ ಅಧಿಕ ವೀಕ್ಷಣ ಕಂಡಿದ್ದು, ಸಾವಿರಾರು ಬಾರಿ ಮರು ಹಂಚಿಕೆಯಾಗಿದೆ. ವಿಡಿಯೊ ನೋಡಿರುವ ಅನೇಕರು ತಾಯಿಗೆ ದೊಡ್ಡ ನಮನಗಳು ಎಂದಿದ್ದಾರೆ. ಇನ್ನೂ ಕೆಲವರು, ನಿಮ್ಮ ಫಿಟ್‌ನೆಸ್‌ ರಹಸ್ಯ ಇಂದು ತಿಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

ಉಷಾ ಸೋಮನ್‌ ಅವರು 2016ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಬರಿ ಕಾಲಿನಲ್ಲಿ ಓಡುವ ಮೂಲಕ ಗಮನ ಸೆಳೆದಿದ್ದರು. 100 ಕಿ.ಮೀ. ವಾಕಿಂಗ್‌ನಲ್ಲಿಯೂ ಹಲವು ಬಾರಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.