ADVERTISEMENT

Video: ಸಂಸತ್ತಿನ ಆವರಣದಲ್ಲಿ ಮೋದಿ–ಅದಾನಿ ಅಣಕು ಸಂದರ್ಶನ ನಡೆಸಿದ ರಾಹುಲ್ ಗಾಂಧಿ

ಪಿಟಿಐ
Published 9 ಡಿಸೆಂಬರ್ 2024, 13:19 IST
Last Updated 9 ಡಿಸೆಂಬರ್ 2024, 13:19 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್‌ ಅದಾನಿ ಅವರಂತೆ ಮುಖವಾಡ ಧರಿಸಿದ್ದ ಕಾಂಗ್ರೆಸ್‌ ನಾಯಕರೊಂದಿಗೆ ಕಾಂಗ್ರೆಸ್‌ನ&nbsp;ರಾಹುಲ್‌ ಗಾಂಧಿ</p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್‌ ಅದಾನಿ ಅವರಂತೆ ಮುಖವಾಡ ಧರಿಸಿದ್ದ ಕಾಂಗ್ರೆಸ್‌ ನಾಯಕರೊಂದಿಗೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರು, ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಅವರ ಮುಖವಾಡ ಧರಿಸಿದ್ದ ಕಾಂಗ್ರೆಸ್‌ನ ಇಬ್ಬರು ನಾಯಕರೊಂದಿಗೆ ಅಣಕು ಸಂದರ್ಶನ ನಡೆಸಿದ್ದಾರೆ.

ADVERTISEMENT

ರಾಹುಲ್‌, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಜಮಾಯಿಸಿ 'ಮೋದಿ ಅದಾನಿ ಏಕ್ ಹೈ', 'ಬೇಕೇಬೇಕು ನ್ಯಾಯ ಬೇಕು' ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ, ರಾಹುಲ್‌ ಅಣಕು ಸಂದರ್ಶನ ನಡೆಸಿದ್ದಾರೆ.

'ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಲು ಬಿಡುತ್ತಿಲ್ಲವೇಕೆ?' ಎಂದು ರಾಹುಲ್‌ ಕೇಳಿದ್ದಕ್ಕೆ ಅದಾನಿ ಮುಖವಾಡ ಧರಿಸಿದ್ದ ನಾಯಕ ಪ್ರತಿಕ್ರಿಯಿಸಿ, 'ಅದನ್ನು ನಾವು ಅಮಿತ್‌ ಭಾಯ್‌ (ಅಮಿತ್‌ ಶಾ) ಅವರನ್ನು ಕೇಳಬೇಕು. ಅವರು ಕಾಣೆಯಾಗಿದ್ದಾರೆ' ಎಂದಿದ್ದಾರೆ.

ಇಬ್ಬರ (ಮೋದಿ, ಅದಾನಿ) ನಡುವಿನ ಸಂಬಂಧದ ಕುರಿತು ಕೇಳಿದಾಗ, 'ನಾವಿಬ್ಬರೂ ಒಂದೇ. ನಾನು ಹೇಳುವುದನ್ನೆಲ್ಲ, ಅವರು (ಮೋದಿ) ಮಾಡುತ್ತಾರೆ. ಅದು ವಿಮಾನ ನಿಲ್ದಾಣವೇ ಆಗಿರಲಿ ಅಥವಾ ಬೇರೆ ಏನೇ ಆಗಿರಲಿ' ಎಂದು ಹೇಳಿದ್ದಾರೆ.

'ಮೋದಿ ಅವರು ಮಾತನಾಡುತ್ತಿಲ್ಲವೇಕೆ?' ಎಂಬ ಪ್ರಶ್ನೆಗೆ, 'ಇತ್ತೀಚಿನ ದಿನಗಳಲ್ಲಿ ಅವರು ಒತ್ತಡದಲ್ಲಿದ್ದಾರೆ' ಎಂದು ಉತ್ತರಿಸಿದ್ದಾರೆ. ಈ ವೇಳೆ ಸುತ್ತಲೂ ಇದ್ದವರು ಜೋರಾಗಿ ನಕ್ಕಿದ್ದಾರೆ.

'ನಿಮ್ಮ ಮುಂದಿನ ಯೋಜನೆಗಳೇನು?, ಏನನ್ನು ಖರೀದಿಸಲು ಮುಂದಾಗಿದ್ದೀರಿ?' ಎಂದಾಗ, 'ನಾವಿನ್ನೂ ಅದನ್ನು ನಿರ್ಧರಿಸಿಲ್ಲ. ಇಂದು ಸಂಜೆ ಸಭೆ ಸೇರಲಿದ್ದೇವೆ' ಎಂದು ಹೇಳಿದ್ದಾರೆ.

ಸಂದರ್ಶನದ ವಿಡಿಯೊವನ್ನು ರಾಹುಲ್‌ ತಮ್ಮ ಎಕ್ಸ್‌/ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದರು ಪ್ರತಿಭಟನೆಯಲ್ಲಿ  ಭಾಗವಹಿಸಿರಲಿಲ್ಲ. ಆದಾಗ್ಯೂ, ಎಸ್‌ಪಿ ನಾಯಕ ರಾಮ್‌ ಗೋಪಾಲ್‌ ಯಾದವ್ ಅವರು, ಸಂಸದರ ಗೈರಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮೈತ್ರಿಕೂಟದಲ್ಲಿ 'ಎಲ್ಲವೂ ಸರಿಯಾಗಿದೆ' ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಡಿಎಂಕೆ, ಶಿವಸೇನಾ (ಯುಬಿಟಿ), ಆರ್‌ಜೆಡಿ, ಶರದ್‌ ಪವಾರ್‌ ಬಣದ ಎನ್‌ಸಿಪಿ ಸಂಸದರು, ಅದಾನಿ ಪ್ರಕರಣದ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.