ಎಂ.ಕೆ.ಸ್ಟಾಲಿನ್
ಪಿಟಿಐ
ಚೆನ್ನೈ: ‘ಮತ್ತೊಂದು ಭಾಷಾ ಸಮರಕ್ಕೆ ರಾಜ್ಯ ಸಿದ್ಧವಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ‘ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಹೋರಾಡಲು ನಾವು ಸದಾ ಸಿದ್ಧ’ ಎಂದರು.
ಹಿಂದಿ ಹೇರಿಕೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಆಡಳಿತರೂಢ ಡಿಎಂಕೆ ಸರ್ಕಾರ ಕೋಟಿ ಕೊಟ್ಟರೂ ಎನ್‌ಇಪಿ ಜಾರಿಗೆ ತರುವುದಿಲ್ಲ ಎಂದು ಹೇಳಿತ್ತು.
‘ಕೇಂದ್ರದಿಂದ ಕ್ಷೇತ್ರ ಪುನರ್ ವಿಂಗಡಣೆ ಬೆದರಿಕೆ’
‘ಎಲ್ಲಾ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ನಂತರ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಬೆದರಿಕೆ ಎದುರಿಸುತ್ತಿದೆ’ ಎಂದು ಸ್ಟಾಲಿನ್ ಹೇಳಿದರು.
ಈ ವಿಷಯದ ಬಗ್ಗೆ ಚರ್ಚಿಸಲು ಮಾರ್ಚ್ 5ರಂದು ಸರ್ವ ಪಕ್ಷ ಸಭೆ ಕರೆಯಲು ತಿರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕ್ಷೇತ್ರ ಪುನರ್ ವಿಂಗಡಣೆಯ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ, ನೀಟ್ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಾಕಷ್ಟು ಸಂಖ್ಯೆಯ ಸಂಸದರ ಅಗತ್ಯವಿದೆ. ಆದರೆ ಇದಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಅಡ್ಡಿಯಾಗುತ್ತದೆ’ ಎಂದೂ ಹೇಳಿದರು.
‘ಜನಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದ್ದು, ಲೋಕಾಸಭಾ ಸದಸ್ಯರ ಸಂಖ್ಯೆ 39ರಿಂದ 31ಕ್ಕೆ ಇಳಿಯಲಿದೆ’ ಎಂದು ಆತಂಕ ಹೊರಹಾಕಿದರು.
‘ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯ ಕಡಿಮೆ ಮಾಡುವ ಮೂಲಕ ತಮಿಳರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದು ತಮಿಳುನಾಡಿನ ಜನರ ಹಕ್ಕಿನ ಪ್ರಶ್ನೆಯಾಗಿದ್ದು, ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ದನಿ ಎತ್ತಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.