ಕೋಲ್ಕತ್ತ: ಬಿಜೆಪಿ ಮುಖ್ಯ ಸಚೇತಕ ಶಂಕರ್ ಘೋಷ್ ಸೇರಿದಂತೆ ನಾಲ್ವರು ಶಾಸಕರನ್ನು ಅಮಾನತುಗೊಳಿಸಿದ ಘಟನೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ಸಾಕ್ಷಿಯಾಯಿತು.
ಹೆಸರಾಂತ ಆರ್ಥಿಕ ತಜ್ಞರೂ ಆಗಿರುವ ಶಾಸಕ ಅಶೋಕ ಲಿಹ್ರಿ ಅವರನ್ನೂ ಒಳಗೊಂಡು ಪಕ್ಷದ ಶಾಸಕ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಿರುವುದನ್ನು ಖಂಡಿಸಿ ಶಂಕರ್ ಘೋಷ್ ನೇತೃತ್ವದಲ್ಲಿ ಬಿಜೆಪಿಯ 40 ಶಾಸಕರು ಪ್ರತಿಭಟನೆ ನಡೆಸಿದರು
ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಮುಂದುವರಿಸಿ ಘೋಷಣೆಗಳನ್ನು ಕೂಗಲಾರಂಭಿಸಿದ ಬಿಜೆಪಿ ಶಾಸಕರು, ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರು ಶಾಸಕರು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಪ್ರತಿಭಟನಾನಿರತರು ಸ್ಪೀಕರ್ ಮಾತಿಗೆ ಸೊಪ್ಪುಹಾಕಲಿಲ್ಲ.
ಹೀಗಾಗಿ, ಬಂಡೋಪಾಧ್ಯಾಯ ಅವರು ನಾಲ್ವರು ಶಾಸಕರನ್ನು ಪ್ರಸ್ತುತ ಅಧಿವೇಶನದಿಂದ ಅಮಾನತು ಮಾಡಿ ಆದೇಶಿಸಿದರು.
ಸದನಕ್ಕೆ ಅಡ್ಡಿಪಡಿಸಿದ ಹಾಗೂ ಸ್ಪೀಕರ್ ಅವರಿಗೆ ಅಗೌರವ ತೋರಿದ ಆರೋಪದಲ್ಲಿ ಶಂಕರ್ ಘೋಷ್, ಅಗ್ನಿಮಿತ್ರ ಪೌಲ್, ದೀಪಕ್ ಬರ್ಮನ್ ಹಾಗೂ ಮನೋಜ್ ಒರಾನ್ ಅವರು ಅಮಾನತಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.