ADVERTISEMENT

ಪಾಕಿಸ್ತಾನ ಬೆಂಬಲಿಗರಿಗೆ ಮೇ 2ರಂದು ಉತ್ತರ ದೊರಕಲಿದೆ: ಸುವೇಂದು ಅಧಿಕಾರಿ

ಏಜೆನ್ಸೀಸ್
Published 18 ಮಾರ್ಚ್ 2021, 2:41 IST
Last Updated 18 ಮಾರ್ಚ್ 2021, 2:41 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಕಾವೇರುತ್ತಿರುವಂತೆಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುವೇಂದು ಅಧಿಕಾರಿ, ಪಾಕಿಸ್ತಾನ ಬೆಂಬಲಿಗರಿಗೆ ಮೇ 2ರಂದು ಉತ್ತರ ದೊರಕಲಿದೆ ಎಂದು ಹೇಳಿದ್ದಾರೆ.

ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ. ಮೇ 2ರಂದು ಪಾಕಿಸ್ತಾನ ಬೆಂಬಲಿಗರಿಗೆ ಉತ್ತರ ಸಿಗಲಿದೆ. ಅವರು ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಗೆದ್ದಾಗ ಸಂಭ್ರಮಿಸುತ್ತಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿರುವುದನ್ನು ಸುವೇಂದು ಅಧಿಕಾರಿ ಸ್ವಾಗತಿಸಿದರು.

ADVERTISEMENT

ಅಲ್ಲದೆ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿದಾಗ ತಮ್ಮ ತಾಯಿ ಶಂಕ ಊದಿದ್ದರು ಎಂದು ಹೇಳಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ ನಡೆಸಿದರು. ಕಾಲಿಗೆ ಗಾಯಗೊಂಡಿರುವುದರಿಂದ ಅನುಕಂಪದ ಮತ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಟಿಎಂಸಿ ಪಕ್ಷವನ್ನು ತೊರೆದಿರುವ ಸುವೇಂದ್ರ ಅಧಿಕಾರಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಅಲ್ಲದೆ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಚುನಾವಣೆ ಆರಂಭವಾಗಿಲಿದ್ದು, ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.