ADVERTISEMENT

ತಮಿಳುನಾಡು: ಅಲೆರಹಿತ ಚುನಾವಣೆ ಎತ್ತ ಬೀಸಲಿದೆ ಗಾಳಿ?

ಇ.ಟಿ.ಬಿ ಶಿವಪ್ರಿಯನ್‌
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST
ಮಗ ಉದಯನಿಧಿ ಸ್ಪರ್ಧಿಸಿರುವ ಚೆನ್ನೈನ ಚಿಪಾಕ್‌–ತಿರುವಲ್ಲಿಕೆಣಿ ಕ್ಷೇತ್ರದಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಪ‍್ರಚಾರದ ಕೊನೆಯ ದಿನ ರೋಡ್ ಶೋ ನಡೆಸಿದರು ಪಿಟಿಐ ಚಿತ್ರ
ಮಗ ಉದಯನಿಧಿ ಸ್ಪರ್ಧಿಸಿರುವ ಚೆನ್ನೈನ ಚಿಪಾಕ್‌–ತಿರುವಲ್ಲಿಕೆಣಿ ಕ್ಷೇತ್ರದಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಪ‍್ರಚಾರದ ಕೊನೆಯ ದಿನ ರೋಡ್ ಶೋ ನಡೆಸಿದರು ಪಿಟಿಐ ಚಿತ್ರ   

ಚೆನ್ನೈ: ತಮಿಳುನಾಡಿನ ಚುನಾವಣಾ ಇತಿಹಾಸದಲ್ಲೇ ಅತಿ ದೀರ್ಘವೆನಿಸಿರುವ, ನಾಲ್ಕು ತಿಂಗಳ ಅವಧಿಯ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದೆ. ಏ.6ರಂದು ನಡೆಯಲಿರುವ ಮತದಾನವು ರಾಜ್ಯದ 16ನೇ ವಿಧಾನಸಭೆಯನ್ನು ಆಯ್ಕೆ ಮಾಡುವುದಷ್ಟೇ ಅಲ್ಲ, ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಲು ಶ್ರಮಿಸುತ್ತಿರುವ, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಹೊಸ ತಲೆಮಾರಿನ ನಾಯಕರ ಭವಿಷ್ಯವನ್ನೂ ನಿರ್ಧರಿಸಲಿದೆ.

ಜಯಲಲಿತಾ ಅವರ ಸಾವಿನ ಮೂರು ತಿಂಗಳ ನಂತರ, 2017ರಲ್ಲಿ ಮುನ್ನೆಲೆಗೆ ಬಂದ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ, ಎಂ. ಕರುಣಾನಿಧಿ ಅವರ ಸಾವಿನ ನಂತರ ಪಕ್ಷದ ಮುಖ್ಯಸ್ಥರಾಗಿ ನಿಯುಕ್ತರಾಗಿರುವ ಎಂ.ಕೆ. ಸ್ಟಾಲಿನ್‌ ಅವರು ಸವಾಲೊಡ್ಡಿದ್ದಾರೆ. ಸ್ಟಾಲಿನ್‌ ಮುಂದೆ ಪಳನಿಸ್ವಾಮಿ ದುರ್ಬಲ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತಿದೆ.

ಡಿಎಂಕೆಯು ಒಂದು ದಶಕದ ನಂತರ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೂ, ಆಡಳಿತಾರೂಢ ಎಐಎಡಿಎಂಕೆಯು ಪ್ರಚಾರದ ಕೊನೆಯ ದಿನ, ಪ್ರಮುಖ ಪತ್ರಿಕೆಗಳಲ್ಲಿ ನಾಲ್ಕು ಪುಟಗಳ ಜಾಹೀರಾತು ನೀಡಿ, 2006 ರಿಂದ 2011ರ ಅವಧಿಯ ಡಿಎಂಕೆಯ ‘ಕರಾಳ ಆಡಳಿತ’ವನ್ನು ಜನರಿಗೆ ನೆನಪಿಸಿಕೊಟ್ಟಿದೆ. ಎಐಎಡಿಎಂಕೆಯ ಈ ನಡೆಯು ‘ಸೋಲನ್ನು ಮನಗಂಡಿರುವುದರ ಸೂಚನೆ’ ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ ಟೀಕಿಸಿದ್ದಾರೆ.

ADVERTISEMENT

ಸತತವಾಗಿ ಎರಡನೇ ಚುನಾವಣೆಯಲ್ಲೂ ಡಿಎಂಕೆಯು ಬಿಜೆಪಿಯನ್ನೇ ಗುರಿಯಾಗಿಟ್ಟು ಪ್ರಚಾರ ನಡೆಸಿದೆ. ‘ಎಐಎಡಿಎಂಕೆಗೆ ನೀಡಿದ ಪ್ರತಿ ಮತವೂ ಬಿಜೆಪಿಗೆ ಹೋಗುತ್ತದೆ’ ಎಂದು ಹೇಳುತ್ತಾ ಬಂದಿದೆ. ‘ಇದು ತಮಿಳುನಾಡು ಮತ್ತು ದೆಹಲಿ (ಕೇಂದ್ರ ಸರ್ಕಾರ) ನಡುವಿನ ಸ್ಪರ್ಧೆ. ಸಾಮಾಜಿಕ ನ್ಯಾಯ, ಹಿಂದಿ ಹೇರಿಕೆ, ರಾಜ್ಯದ ಸ್ವಾಯತ್ತೆ, ಬಿಜೆಪಿ ರಿಮೋಟ್‌ ಕಂಟ್ರೋಲ್‌ನಲ್ಲಿರುವ ಎಐಎಡಿಎಂಕೆ ಸರ್ಕಾರ...’ ಮುಂತಾದ ವಿಚಾರಗಳು ಡಿಎಂಕೆ ಪ್ರಚಾರದಲ್ಲಿ ಪ್ರತಿಧ್ವನಿಸಿವೆ.

‘ಎಐಎಡಿಎಂಕೆಯು ಪಳನಿಸ್ವಾಮಿ ಅವರ ಇಮೇಜ್ ಹಾಗೂ 10 ವರ್ಷಗಳ ಸಾಧನೆಯನ್ನು ಚಿತ್ರಿಸುವುದರ ಜತೆಗೆ, ಡಿಎಂಕೆಯ ‘ಕುಟುಂಬ ರಾಜಕಾರಣ’ವನ್ನೂ ಗುರಿಯಾಗಿಸಿ ಪ್ರಚಾರ ನಡೆಸಿದೆ. ಬಿಜೆಪಿಗೆ ತಮಿಳುನಾಡಿನಲ್ಲಿ ಅಷ್ಟೊಂದು ಮನ್ನಣೆ ಇಲ್ಲದಿದ್ದರೂ, ಎಐಎಡಿಎಂಕೆಯು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಹೆಚ್ಚಿನ ಉತ್ಸಾಹ ತೋರಿಸಿತ್ತು. ಈ ಕಾರಣದಿಂದ ಈ ಪಕ್ಷದ ದೊಡ್ಡ ಪ್ರಮಾಣದ ಮತಗಳು ಪಕ್ಷದಿಂದಲೇ ಸಿಡಿದು ಸೃಷ್ಟಿಯಾಗಿರುವ ಎಎಂಎಂಕೆಗೆ ಹೋಗುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ, ಸಿಎಎ ಮತ್ತು ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿದ್ದು, ವಣ್ಣಿಯಾರ್‌ ಸಮುದಾಯಕ್ಕೆ ಶೇ 10.5ರಷ್ಟು ಒಳಮೀಸಲಾತಿ ನೀಡಿದ್ದೇ ಮುಂತಾದ ವಿಚಾರಗಳೂ ಎಐಎಡಿಎಂಕೆಗೆ ಮುಳುವಾಗಬಹುದು.

‘ಅಲೆರಹಿತವಾಗಿರುವ ಈ ಚುನಾವಣೆಯಲ್ಲಿ ಆಡಳಿತ ವಿರೋಧಿ ಭಾವನೆ ಅಷ್ಟಾಗಿ ಕಾಣಿಸಲಿಲ್ಲ. ಪಳನಿಸ್ವಾಮಿಯ ಬಗ್ಗೆ ಜನರಲ್ಲಿ ವೈರತ್ವ ಇಲ್ಲದಿದ್ದರೂ, ಈ ಸರ್ಕಾರದ ಹತ್ತು ವರ್ಷಗಳ ಆಡಳಿತವು ದುರ್ಬಲವಾಗಿತ್ತು ಎಂಬ ಭಾವನೆ ಇರುವುದು ಕಾಣಿಸುತ್ತಿದೆ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.