
ವಾಹನಗಳ ಅವಶೇಷಗಳನ್ನು ಪೊಲೀಸರು ಸಂಗ್ರಹಿಸಿದ ವಿಧಿವಿಜ್ಞಾನ ತಜ್ಞರ ತಂಡ
ಪಿಟಿಐ ಚಿತ್ರ
ಶ್ರೀನಗರ: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಫೋಟ ಮತ್ತು ಹರಿಯಾಣದ ಫರೀದಾಬಾದ್‌ನ ಎರಡು ಬಾಡಿಗೆ ಮನೆಗಳಲ್ಲಿ ಪತ್ತೆಯಾದ 2,900 ಕೆ.ಜಿ. ಬಾಂಬ್ ತಯಾರಿಕಾ ಸಾಮಗ್ರಿಗಳು, ಭಾರತದಲ್ಲಿ ‘ವೈಟ್‌ಕಾಲರ್ ಭಯೋತ್ಪಾದನೆ’ ಸಕ್ರಿಯವಾಗಿರುವುದರ ಸೂಚಕವಾಗಿದ್ದು, ಇದು ದೇಶದ ಭದ್ರತೆಗೆ ಹೊಸ ಸವಾಲೊಡ್ಡಿದೆ.
ಸಂಚಿನಲ್ಲಿ ಮೂವರು ಕಾಶ್ಮೀರಿ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ನಿವಾಸದಲ್ಲಿ ಸಿಕ್ಕ ಸ್ಫೋಟಕಗಳನ್ನು ಕಂಡು ತನಿಖಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಮತ್ತು ದೇಶದ ಭಯೋತ್ಪಾದನೆ ಮಾದರಿಯಲ್ಲಿ ಆಘಾತಕಾರಿ ಮಾರ್ಪಾಡಾಗಿರುವುದನ್ನು ಬಯಲಿಗೆಳೆದಿದ್ದಾರೆ.
ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಫೋಟದಲ್ಲಿ ಪತ್ತೆಯಾದ ರಾಸಾಯನಿಕಗಳಿಗೂ, ಫರೀದಾಬಾದ್‌ನಲ್ಲಿ ಪತ್ತೆಯಾದ ಅಮೋನಿಯಂ ನೈಟ್ರೇಟ್‌ಗೂ ಹೋಲಿಕೆ ಇರುವುದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಕಂಡುಬಂದಿದೆ. ಎರಡೂ ಘಟನೆಗಳಿಗೆ ನೇರ ಸಂಬಂಧವಿರುವ ಸಾಧ್ಯತೆಯನ್ನು ಎಂಬುದನ್ನು ಇದು ಸೂಚಿಸುತ್ತದೆ.
‘ಇಸ್ಲಾಮಿಕ್ ಸ್ಟೇಟ್’ ಕಾರ್ಯತಂತ್ರದಲ್ಲಿ ಪರಿಷ್ಕರಣೆ?
ಉಗ್ರರು, ಸಾಂಪ್ರದಾಯಿಕ ವಿಧಾನದ ಬದಲಾಗಿ ಕಪಟತನದಿಂದ ಕೂಡಿದ ಭಯೋತ್ಪಾದನಾ ಮಾದರಿಯನ್ನು ಅನುಸರಿಸುತ್ತಿರುವುದಕ್ಕೆ ಘಟನೆಯು ಕನ್ನಡಿ ಹಿಡಿಯುತ್ತದೆ. ಈ ವಿಧಾನದ ಮೂಲಕ ಪಾಕಿಸ್ತಾನ ಬೆಂಬಲಿತ ಜಾಲವು ಶಿಕ್ಷಿತ ವೃತ್ತಿಪರರನ್ನು ಬಳಸಿಕೊಂಡು ಭಾರತದ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ, ‘ಇಸ್ಲಾಮಿಕ್ ಸ್ಟೇಟ್’ (ಐ.ಎಸ್) 1990 ಮತ್ತು 2000ರಲ್ಲಿ ಬಳಸಿದ್ದ ಕಾರ್ಯತಂತ್ರವನ್ನು ಪರಿಷ್ಕರಿಸಿ ಭಾರತದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಬಹುದೇ ಎಂಬ ಆತಂಕವೂ ಎದುರಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಪ್ರಮಾಣವು ಸಾರ್ವಕಾಲಿಕ ಇಳಿಕೆ ಕಂಡಿದೆ. ಭಯೋತ್ಪಾದನಾ ಕೃತ್ಯಗಳಿಗೆ ಸ್ಥಳೀಯರನ್ನು ನೇಮಕ ಮಾಡುವ ಕಾರ್ಯವಿಧಾನ ಬಹುತೇಕ ತಗ್ಗಿದೆ. 1990 ಮತ್ತು 2000ನೇ ಇಸವಿಯಲ್ಲಿ ಐ.ಎಸ್ ಭಾರತದ ನಗರಗಳನ್ನೇ ಕೇಂದ್ರೀಕರಿಸಿ ಬಾಂಬ್ ದಾಳಿ ನಡೆಸಿತ್ತು. ಆಗ ದೆಹಲಿ, ಮುಂಬೈ ಮತ್ತು ಜೈಪುರವನ್ನು ಪದೇ ಪದೇ ಗುರಿಯಾಗಿಸಲಾಗಿತ್ತು. ಅದೇ ಕಾರ್ಯತಂತ್ರವನ್ನು ಪರಿಷ್ಕರಿಸಿ, ಶಿಕ್ಷಿತ ವೃತ್ತಿಪರರನ್ನು ಬಳಸಿಕೊಂಡು ಕೃತ್ಯ ಎಸಗುವ ದಿಸೆಯಲ್ಲಿ ಅದು ಕಾರ್ಯಪ್ರವೃತ್ತವಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಕಾರ್ಯಾಚರಣೆಗಳಿಂದ ಕಾಶ್ಮೀರದಲ್ಲಿ ಸಾಂಪ್ರದಾಯಿಕ ಭಯೋತ್ಪಾದನಾ ಜಾಲವು ದುರ್ಬಲಗೊಂಡಿದೆ. ಆದರೆ, ವೈಟ್ ಕಾಲರ್ ಭಯೋತ್ಪಾದನೆಯು ಅದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಉಗ್ರ ಸಂಘಟನೆಗಳಲ್ಲಿ ಟೆಕಿಗಳಿರುವ ಉದಾಹರಣೆಗಳಿವೆ. ಆದರೆ ನಗರಗಳ ಮೇಲೆ ಬಾಂಬ್ ದಾಳಿ ಎಸಗುವ ಕೃತ್ಯಗಳ ಹಿಂದೆ ವೈದ್ಯರು ಇರುವುದು ದೇಶದ ಭದ್ರತೆ ವಿಚಾರದಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ ಎಂದಿದ್ದಾರೆ.
ಈ ಮಧ್ಯೆ, ಹೊಸ ಭಯೋತ್ಪಾದನಾ ಮಾದರಿಗೂ ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐ ಮತ್ತು ಗಡಿಯಾದ್ಯಂತ ಇರುವ ಹ್ಯಾಂಡ್ಲರ್‌ಗಳಿಗೂ ನಂಟು ಇರುವ ಸಾಧ್ಯತೆ ಇದೆ ಎಂದೂ ಭಾರತದ ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಮೂವರು ವೈದ್ಯರ ತೀವ್ರ ವಿಚಾರಣೆ
ಕೆಂಪುಕೋಟೆ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ವೈದ್ಯರಾದ ಆದಿಲ್ ಅಹ್ಮದ್ ರಾಠರ್ ಮುಜಮ್ಮಿಲ್ ಶಕೀಲ್ ಮತ್ತು ಉಮರ್ ಮೊಹಮ್ಮದ್ ಎಂಬುವವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಮೂವರ ನಿವಾಸದಲ್ಲಿ ಅಪಾರ ಪ್ರಮಾಣದ ಬಾಂಬ್ ತಯಾರಿಕಾ ಸಾಮಗ್ರಿಗಳು ಪತ್ತೆಯಾಗಿವೆ. ಈ ಮೂವರೂ ವೈದ್ಯರು ಮೊದಲಿಗೆ ವೈದ್ಯಕೀಯ ಕ್ಷೇತ್ರದಲ್ಲಿಯೇ ಪರಿಚಿತರಾಗಿದ್ದರು. ನಂತರ ಆನ್‌ಲೈನ್ ಮೂಲಕ ಮೂಲಭೂತವಾದಿ ಚಿಂತನೆಗಳನ್ನು ಬೆಳೆಸಿಕೊಂಡರು. ಬಳಿಕ ಮಾನವೀಯ ಮತ್ತು ಧಾರ್ಮಿಕ ಕಾರ್ಯಗಳ ಸೋಗಿನಲ್ಲಿ ಉಗ್ರ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.