ADVERTISEMENT

ವೈಟ್‌ ಕಾಲರ್‌ ಭಯೋತ್ಪಾದನೆ: ಪಾಕ್‌, ಬಾಂಗ್ಲಾದಲ್ಲಿ ಶಿಕ್ಷಣ ಪಡೆದವರ ಮೇಲೆ ನಿಗಾ

ಪಿಟಿಐ
Published 17 ನವೆಂಬರ್ 2025, 23:30 IST
Last Updated 17 ನವೆಂಬರ್ 2025, 23:30 IST
   

ಶ್ರೀನಗರ: ವೈದ್ಯಕೀಯ ಪದವೀಧರರು ಸೇರಿದಂತೆ ವಿದ್ಯಾವಂತರೇ ‘ವೈಟ್‌ ಕಾಲರ್‌’ ಭಯೋತ್ಪಾದನೆಯಲ್ಲಿ ತೊಡಗಿರುವುದು ಖಚಿತವಾಗುತ್ತಿದ್ದಂತೆಯೇ, ಕಳೆದೆರಡು ದಶಕಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಎಂಬಿಬಿಎಸ್‌ ವೈದ್ಯಕೀಯ ಪದವಿ ಪಡೆದವರ ಪರಿಶೀಲನೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ.

‘2000ನೇ ಇಸವಿಯ ಆರಂಭದಿಂದಲೂ ನೂರಾರು ಕಾಶ್ಮೀರಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ಅನೇಕರು ಬಾಂಗ್ಲಾದೇಶಕ್ಕೆ ತೆರಳಿ ಶಿಕ್ಷಣ ಪಡೆದಿದ್ದಾರೆ. ಹೀಗಾಗಿ, ಸಂಭಾವ್ಯ ಆರ್ಥಿಕ ವಹಿವಾಟು ಮತ್ತು ಗಡಿಯಾಚೆಗಿನ ಸಂಪರ್ಕ ಹೊಂದಿರುವವರ ಬಗ್ಗೆ ಈಗ ಮರುಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

2001 ಮತ್ತು 2010ರ ನಡುವೆ ಮೊದಲ ಹಂತದಲ್ಲಿ ಕಾಶ್ಮೀರಿ ವಿದ್ಯಾರ್ಥಿಗ‌ಳು, ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಪಾಕಿಸ್ತಾನದ ರಾವಲ್ಪಿಂಡಿ, ಅಬೋಟಾಬಾದ್, ಬಹವಾಲ್ಪುರ್, ಫೈಸಲಾಬಾದ್ ಮತ್ತು ಪೆಶಾವರದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ಹಲವು ವಿದ್ಯಾರ್ಥಿಗಳು ಭಯೋತ್ಪಾದನಾ ಚಟುವಟಿಕೆಗಳು ತೀವ್ರವಾಗಿದ್ದಾಗ , ಇನ್ನೂ ಕೆಲವರು ಪ್ರತ್ಯೇಕತಾವಾದಿಯ ಜಾಲಗಳು ಮತ್ತು ಉಗ್ರಗಾಮಿ ಕುಟುಂಬಗಳ ಸಂಪರ್ಕದ ಮೂಲಕ ದೇಶದ ಗಡಿ ದಾಟಿದ್ದಾರೆ.

ADVERTISEMENT

‘ವೈದ್ಯಕೀಯ ಸೇರಿದಂತೆ ವೃತ್ತಿಪರ ಶಿಕ್ಷಣಕ್ಕಾಗಿ ಪಾಕಿಸ್ತಾನ ಮೂಲದ ದತ್ತಿಸಂಸ್ಥೆಗಳ ನೆರವಿನಿಂದ ಪಾಕಿಸ್ತಾನ ಪ್ರವೇಶಿಸುವ ವಿದ್ಯಾರ್ಥಿಗಳು, ನಂತರ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸುತ್ತಾರೆ. ಈ  ವಿದ್ಯಾರ್ಥಿಗಳಿಗೆ ಟ್ಯೂಷನ್‌ ಶುಲ್ಕದ ನೆಪದಲ್ಲಿ ಹವಾಲಾ ಮಾರ್ಗಗಳ ಮೂಲಕವೂ ಹಣವನ್ನು ರವಾನಿಸಲಾಗಿದೆ ಎಂಬ ವಿಷಯವನ್ನು ಗುಪ್ತಚರ ಸಂಸ್ಥೆಗಳು ಬಹಳ ಹಿಂದಿನಿಂದಲೂ ಗಮನಿಸಿವೆ.

ಹೀಗೆ ಪಾಕಿಸ್ತಾನದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಕಾಶ್ಮೀರಕ್ಕೆ ಹಿಂತಿರುಗಿದ‌ ಪದವೀಧರರು ಭಾರತದಲ್ಲಿರುವ ವೈದ್ಯಕೀಯ ಮಾನ್ಯತೆ ಮತ್ತು ಅರ್ಹತಾ ಪರೀಕ್ಷೆಯಂತಹ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂಥವರಲ್ಲಿ ಕೆಲವ‌ರು ಲಷ್ಕರ್-ಎ-ತಯಬಾ ಮತ್ತು ಹಿಜ್ಬುಲ್ ಮುದ್ಜಾಹಿದೀನ್ ಸಂಘಟನೆಯ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರೆಂದು ತನಿಖಾ ಸಂಸ್ಥೆಗಳು ಹೇಳುತ್ತವೆ. ಆದರೆ ಇವರಲ್ಲಿ ಬಹುಪಾಲು ಮಂದಿ ‌ಕಾನೂನಾದಾರಿತ ಆರೋಗ್ಯ ಸೇವಾ ವಲಯದಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ. ಇನ್ನೂ ಕೆಲವರು ವಿದೇಶಗಳಿಗೆ ತೆರಳಿದ್ದಾರೆ.

‘ಹಣಕಾಸು ವಹಿವಾಟು ಮತ್ತು ಸಂವಹನಗಳಲ್ಲಿ ಸಂಶಯಾಸ್ಪದ ಅಂಶಗಳ ಕಂಡು ಬಂದ ವಿದ್ಯಾರ್ಥಿಗಳಿಗೆ ಮಾತ್ರ ಈ ಮಾನ್ಯತೆ ಮತ್ತು ಅರ್ಹತಾ ಪರೀಕ್ಷೆಯ ಸವಾಲು ಎದುರಾಗಿತ್ತು. ಇಂಥವರ ಸಂಖ್ಯೆ ಅತ್ಯಲ್ಪ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಪಾಕಿಸ್ತಾನದಲ್ಲಿ ಶಿಕ್ಷಣ ಪಡೆದ ವೈದ್ಯರ ತಪಾಸಣೆಯನ್ನು ತೀವ್ರಗೊಳಿಸಲು ಆರಂಭಿಸಿದ ಮೇಲೆ, ಕಳೆದ ದಶಕದಿಂದ ಡಜನ್‌ನಷ್ಟು ಕಾಶ್ಮೀರಿ ವಿದ್ಯಾರ್ಥಿಗಳು ಎಂಬಿಬಿಎಸ್ ಶಿಕ್ಷಣಕ್ಕಾಗಿ ಬಾಂಗ್ಲಾದೇಶದ ಕಾಲೇಜುಗಳ ಬಾಗಿಲು ತಟ್ಟುತ್ತಿದ್ದಾರೆ. ಕಡಿಮೆ ಶುಲ್ಕ ಮತ್ತು ಖಚಿತವಾಗಿ ಪ್ರವೇಶಾವಕಾಶ ಸಿಗುವಂತಹ ವ್ಯವಸ್ಥೆಯಿರುವ ಕಾರಣದಿಂದಾಗಿ ಬಾಂಗ್ಲಾದ ಢಾಕಾ, ಸ್ಯಿಲ್ಹೆಟ್‌, ರಾಜ್‌ಶಾಹಿ ಮತ್ತು ಚಿತ್ತಗಾಂಗ್‌ ನಗರಗಳಲ್ಲಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.