ADVERTISEMENT

24ನೇ ವಯಸ್ಸಿಗೆ ಶಾಸಕ, ಸೋಲಿಲ್ಲದ ಸರದಾರ: ಯಾರಿದು BJPಯ ಹೊಸ ಕಾರ್ಯಾಧ್ಯಕ್ಷ ನಬೀನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2025, 13:15 IST
Last Updated 15 ಡಿಸೆಂಬರ್ 2025, 13:15 IST
<div class="paragraphs"><p>ನಿತಿನ್ ನಬೀನ್</p></div>

ನಿತಿನ್ ನಬೀನ್

   

-ಫೇಸ್‌ಬುಕ್‌ ಚಿತ್ರ

ಬಿಹಾರ ಸಚಿವ ನಿತಿನ್ ನಬೀನ್ ಅವರನ್ನು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಬಿಜೆಪಿ ಭಾನುವಾರ ನೇಮಕ ಮಾಡಿದೆ. ಆ ಮೂಲಕ ಮತ್ತೊಮ್ಮೆ ಅಚ್ಚರಿಯ ಮುಖಕ್ಕೆ ಮಣೆ ಹಾಕಿದೆ.

ADVERTISEMENT

45 ವರ್ಷದ ನಬೀನ್ ಈ ಹುದ್ದೆಗೆ ನೇಮಕವಾದ ಅತಿ ಕಿರಿಯ ವ್ಯಕ್ತಿ. 2026ರ ಜನವರಿಯಲ್ಲಿ ಜೆ.ಪಿ ನಡ್ಡಾ ಅವರ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರೆ, ಬಿಹಾರದಿಂದ ಈ ಹುದ್ದೆಗೇರಿದ ಮೊದಲಿಗರಾಗುತ್ತಾರೆ.

ಸದ್ಯ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಸ್ತೆ ಹಾಗೂ ನಗರಾಭಿವೃದ್ಧಿ ಸಚಿವರಾಗಿರುವ ನಬೀನ್ ಅವರಿಗೆ ಎರಡು ದಶಕಕ್ಕೂ ಅಧಿಕ ಸಂಘಟನಾ ಅನುಭವವಿದೆ. ಬಿಹಾರ ಬಿಜೆ‍ಪಿ ಯುವಘಟಕದಿಂದ ಚುನಾವಣಾ ಜವಾಬ್ದಾರಿಗಳನ್ನು ವಹಿಸಿಕೊಳ್ಳುವವರೆಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಪಟ್ನಾದ ಬಂಕಿಮಪುರ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು, 2008ರಲ್ಲಿ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. 2010–2016ರವರೆಗೆ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. 2016ರಿಂದ 2019ರವರೆಗೆ ಬಿಹಾರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. ಈವರೆಗೆ ರಸ್ತೆ ನಿರ್ಮಾಣ, ನಗರಾಭಿವೃದ್ಧಿ, ವಸತಿ, ಕಾನೂನು ಹಾಗೂ ನ್ಯಾಯ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ.

ಕಾಯಸ್ತ ಸಮುದಾಯಕ್ಕೆ ಸೇರಿದ ನಬೀನ್, ಬಿಜೆಪಿಯ ಹಿರಿಯ ನಾಯಕ ನವಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. 12ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ನಬೀನ್, 26 ವರ್ಷವಿದ್ದಾಗಲೇ ಚುನಾವಣಾ ಕಣಕ್ಕೆ ಧುಮುಕಿದ್ದರು. 2006ರಲ್ಲಿ ತಂದೆ ಸಿನ್ಹಾ ಅವರ ನಿಧನದಿಂದ ತೆರವಾದ ಪಟ್ನಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕಿಳಿದಿದಿದ್ದರು. ಈ ಕ್ಷೇತ್ರದಿಂದ ಸಿನ್ಹಾ ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದರು.

ಅದಾದ ಬಳಿಕ ಆ ಕ್ಷೇತ್ರದಿಂದ ಎರಡು ದಶಕ, ಸತತ ಐದು ಬಾರಿ ಗೆದ್ದಿದ್ದಾರೆ. ಆ ಕ್ಷೇತ್ರಕ್ಕೆ ಬಂಕಿಮಪುರ ಎಂದು ಮರುನಾಮಕರಣ ಮಾಡಲಾಗಿದೆ.

ಸಿಕ್ಕಿಂ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಹ–ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು.

ಭಾರಿ ಮತಗಳ ಅಂತರದಿಂದ ಚುನಾವಣೆ ಗೆದ್ದು ಹೆಸರು ಪಡೆದಿರುವ ನಬೀನ್, 2006ರಲ್ಲಿ ತಮ್ಮ ಮೊದಲ ಚುನಾವಣೆಯನ್ನು 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 51,900 ಮತಗಳು.

ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ನಬೀನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ‘ಶ್ರಮಜೀವಿ ಕಾರ್ಯಕರ್ತ’ ಎಂದು ಬಣ್ಣಿಸಿದ್ದಾರೆ.

‘ಅವರು ಯುವ ಮತ್ತು ಶ್ರಮಶೀಲ ನಾಯಕರಾಗಿದ್ದು, ಸಂಘಟನಾ ಕ್ಷೇತ್ರದಲ್ಲಿ ಶ್ರೀಮಂತ ಅನುಭವ ಹೊಂದಿದ್ದಾರೆ. ಬಿಹಾರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿ ಹಲವು ಅವಧಿಗೆ ದಾಖಲೆಯನ್ನು ಹೊಂದಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

‘ಜ್ಞಾನ ಮತ್ತು ಸಂಸ್ಕೃತಿಯ ಪವಿತ್ರ ಭೂಮಿ ಬಿಹಾರದಿಂದ ಬಂದ ಕ್ರಿಯಾಶೀಲ ನಾಯಕ’ ಎಂದು ನಬೀನ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಣ್ಣಿಸಿದ್ದಾರೆ. ಅವರ ನಾಯಕತ್ವದಲ್ಲಿ, ಮೋದಿ ಮಾರ್ಗದರ್ಶನದಲ್ಲಿ ಪಕ್ಷವು ಹೊಸ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.