ADVERTISEMENT

ರಫೇಲ್ ದಾಖಲೆ ಕದ್ದವರು ಯಾರು?: ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿಬಿದ್ದ ‘ನೆಹರು’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 10:00 IST
Last Updated 8 ಮಾರ್ಚ್ 2019, 10:00 IST
   

ರಫೇಲ್‌ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಇಲಾಖೆ ಕಚೇರಿಯಿಂದ ಕಳವಾಗಿವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದ ಬೆನಲ್ಲೇ, ಈ ಕುರಿತ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಭಾರತ ಹಾಗೂ ಫ್ರಾನ್ಸ್‌ ನಡುವಣ ರಕ್ಷಣಾ ಒಪ್ಪಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕೋರಿದ್ದ ಅರ್ಜಿಗಳನ್ನು 2018ರ ಡಿಸೆಂಬರ್‌ 28 ವಜಾ ಮಾಡಿದ್ದ ಸುಪ್ರೀಂ, ಕೇಂದ್ರ ಸರ್ಕಾರಕ್ಕೆ ಕ್ಲೀನ್‌ ಚಿಟ್‌ ನೀಡಿತ್ತು. ಆದಾಗ್ಯೂ ರಫೇಲ್‌ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ವಿರೋಧ ಪಕ್ಷಗಳು ಆರೋಪಿಸಿದ್ದವು. ಸದ್ಯ ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರವು ‘ದಾಖಲೆ ಕಳವಾಗಿದೆ’ ಎಂದು ಮಾಹಿತಿ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮೀಮ್‌ಗಳ ಮೂಲಕ ಕೇಂದ್ರ ಸರ್ಕಾರ ಹಾಗು ಬಿಜೆಪಿಯ ಕಾಲೆಳೆದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಆರ್‌ಎಸ್‌ಎಸ್‌ ದೇಶದ ಎಲ್ಲ ಸಮಸ್ಯೆಗಳಿಗೆ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಕಾರಣ ಎಂದು ಈ ಹಿಂದೆ ಹರಿಹಾಯ್ದಿದ್ದರು. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೂ ನೆಹರು ಆಡಳಿತವೇ ಕಾರಣ ಎಂದು ದೂರಿದ್ದರು.

ADVERTISEMENT

‘ಒಂದು ವೇಳೆ ಸರ್ದಾರ್‌ ವಲ್ಲಭಭಾಯ್‌ ಪಟೇಲರು ದೇಶದ ಮೊದಲ ಪ್ರಧಾನಿಯಾಗಿದ್ದಿದ್ದರೆ, ಕಾಶ್ಮೀರ ಪರಿಸ್ಥಿತಿ ಇಂದು ಭಿನ್ನವಾಗಿರುತ್ತಿತ್ತು’ ಎಂದುಮೋದಿ ಅವರುಹಲವು ಸಂದರ್ಭಗಳಲ್ಲಿ ಹೇಳಿದ್ದರು. 1947ರಲ್ಲಿ ದೇಶ ವಿಭಜನೆಯಲ್ಲಿ (ಭಾರತ ಮತ್ತು ಪಾಕಿಸ್ತಾನ) ಪ್ರಮುಖ ಪಾತ್ರ ವಹಿಸಿದ್ದ ನೆಹರು ರೈತರಿಗಾಗಿ ಏನನ್ನೂ ಮಾಡಿಲ್ಲ ಎಂದೂ ಕಿಡಿಕಾರಿದ್ದರು.

ಆರ್‌ಎಸ್‌ಎಸ್‌ ನಾಯಕ ಕೆ.ಎಸ್‌. ಸುದರ್ಶನ್‌ ಅವರು 2005ರ ಏಪ್ರಿಲ್‌ನಲ್ಲಿ, ಮಹಾತ್ಮ ಗಾಂಧಿ ಹತ್ಯೆಗೆ ನೆಹರು ಕಾರಣವೇ ಹೊರತು ನಾಥುರಾಮ್‌ ಗೋಡ್ಸೆ ಅಲ್ಲ ಎಂದು ಆರೋಪಿಸಿದ್ದರು.

ಇದೀಗ ಈ ಎಲ್ಲ ಆರೋಪಗಳ ಹಿನ್ನಲೆಯಲ್ಲಿ ರಫೇಲ್‌ ಪ್ರಕರಣದ ಮೀಮ್‌ಗಳು ಬಿಜೆಪಿ ವಿರುದ್ಧ ವ್ಯಂಗ್ಯವಾಡಿವೆ.ನೆಹರು ಆಡಳಿತಾವಧಿಯಲ್ಲಿ ಸೆರೆ ಹಿಡಿಯಲಾಗಿರುವ ಕೆಲವು ಚಿತ್ರಗಳನ್ನು ಸದ್ಯದ ಸನ್ನಿವೇಶಕ್ಕೆ ಹೊಂದುವಂತೆ ಬಳಸಿಕೊಂಡಿರುವ ನೆಟ್ಟಿಗರು, ‘ಬಿಜೆಪಿಯ ಎಲ್ಲ ಟೀಕೆಗಳ ನೆಚ್ಚಿನ ಆಯ್ಕೆ ಹಾಗೂ ಅದರ ಪ್ರಕಾರದೇಶದ ಎಲ್ಲ ಸಮಸ್ಯೆಗಳಿಗೂ ಕಾರಣವಾಗಿರುವ ನೆಹರು ಅವರೇ ಈ ಕಳವು ಪ್ರಕರಣದ ಸಂಪೂರ್ಣ ಜವಾಬ್ದಾರ’ ಎಂಬರ್ಥದ ಮೀಮ್‌ಗಳನ್ನು ಹರಿಬಿಟ್ಟಿದ್ದಾರೆ.

ವೈರಲ್‌ ಆದ ಕೆಲವು ಮೀಮ್‌ಗಳು ಇಲ್ಲಿವೆ.
* ದಿನದ 23 ಗಂಟೆಗಳ ಕಾಲ ಕೆಲಸ ಮಾಡಿದ ಪ್ರಧಾನಿ ಮೋದಿ, ವಿಶ್ರಾಂತಿಗಾಗಿ 10 ನಿಮಿಷಗಳ ಸಣ್ಣ ನಿದ್ರೆಗೆ ಜಾರಿದ್ದ ಸಂದರ್ಭ ನೆಹರು ಅವರು ರಫೇಲ್ ಒಪ್ಪಂದದ ದಾಖಲೆಗಳನ್ನು ಹೊತ್ತೊಯ್ಯುತ್ತಿರುವುದನ್ನುಸೋರಿಕೆಯಾಗಿರುವಸಿಸಿಟಿವಿ ದೃಶ್ಯಾವಳಿಗಳು ಪ್ರಕಟಿಸಿವೆ.

* ಮಧ್ಯರಾತ್ರಿ ವೇಳೆರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆರಕ್ಷಣಾ ಇಲಾಖೆ ಕಚೇರಿಯಿಂದನೆಹರು ತೆರಳುತ್ತಿರುವ ಸಿಸಿಟಿವಿ ದೃಶ್ಯ.

* 2019ರಲ್ಲಿ ಮೋದಿ ಆಡಳಿತವನ್ನು ಕೊನೆಗಾಣಿಸುವ ಸಲುವಾಗಿ, ರಕ್ಷಣಾ ಸಚಿವಾಲಯದ ಕಚೇರಿಯಿಂದ ರಫೇಲ್‌ ಒಪ್ಪಂದದ ದಾಖಲೆಗಳನ್ನು ಪಂಡಿತ್‌ ನೆಹರು ಕದಿಯುತ್ತಿರುವುದು.

* ಕಳವಾಗಿರುವ ರಫೇಲ್‌ ಒಪ್ಪಂದ ದಾಖಲೆಗಳನ್ನು ನೆಹರು ಹಿಡಿದಿರುವುದು.

* ರಫೇಲ್‌ ಒಪ್ಪಂದ/ಹಗರಣದ ದಾಖಲೆಗಳೊಂದಿಗೆ ನೆಹರು.

* ರಫೇಲ್‌ ದಾಖಲೆಗಳು ಕಳವಿಗೆ ನೆಹರು ಕಾರಣ.

* ರಫೇಲ್‌ ಒಪ್ಪಂದದ ದಾಖಲೆಗಳ ಕಳವಾಗಿವೆ ಎಂದು ಮೋದಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ನೆಹರು ಅವರು ನೈತಿಕ ಜವಾಬ್ದಾರಿ ಹೊರಲಿದ್ದಾರೆಯೇ ಮತ್ತು ರಾಜೀನಾಮೆ ನೀಡುವರೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.