ಜೈರಾಮ್ ರಮೇಶ್
–ಪಿಟಿಐ ಚಿತ್ರ
ನವದೆಹಲಿ: ವಿಧಾನಸಭೆಯ ಎರಡು ಅಧಿವೇಶನಗಳ ನಡುವೆ ಆರು ತಿಂಗಳುಗಳಿಗಿಂತ ಹೆಚ್ಚಿನ ಅಂತರ ಇರುವಂತಿಲ್ಲ ಎಂದು ಸಂವಿಧಾನದ 174(1)ನೆಯ ವಿಧಿಯು ಹೇಳುತ್ತದೆಯಾದರೂ, ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಅಧಿವೇಶನವನ್ನು ಕರೆಯದೆ ಇರುವ ಮೂಲಕ ಮಣಿಪುರ ರಾಜ್ಯಪಾಲರು ಈ ವಿಧಿಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಸಂವಿಧಾನದ ಪ್ರಕಾರ ಕಡ್ಡಾಯವಾಗಿ ನಡೆಯಲೇಬೇಕಿರುವ ಮಣಿಪುರ ವಿಧಾನಸಭೆಯ ಅಧಿವೇಶನಕ್ಕೆ ಇಂದು (ಮಂಗಳವಾರ) ಕಡೆಯ ದಿನ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಹಿಂದಿನ ಅಧಿವೇಶನದ ಕಡೆಯ ದಿನ ಹಾಗೂ ನಂತರದ ಅಧಿವೇಶನದ ಮೊದಲ ದಿನದ ನಡುವೆ ಆರು ತಿಂಗಳುಗಳಿಗಿಂತ ಹೆಚ್ಚಿನ ಅಂತರ ಇರುವಂತಿಲ್ಲ ಎಂದು 174(1)ನೆಯ ವಿಧಿಯು ಹೇಳುತ್ತದೆ ಎಂದು ರಮೇಶ್ ವಿವರಿಸಿದ್ದಾರೆ. ‘ಮಣಿಪುರ ವಿಧಾನಸಭಾ ಅಧಿವೇಶನ ಕರೆಯದೆ ಇರುವ ಮೂಲಕ ರಾಜ್ಯಪಾಲರು 174(1)ನೆಯ ವಿಧಿಯನ್ನು ಉಲ್ಲಂಘಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.
ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಎರಡು ದಿನಗಳ ನಂತರ ರಮೇಶ್ ಅವರು ಈ ಪ್ರಶ್ನೆ ಎತ್ತಿದ್ದಾರೆ.
ಮಣಿಪುರದಲ್ಲಿ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭ ಆಗಬೇಕಿತ್ತು. ಆದರೆ, ಸಿಂಗ್ ರಾಜೀನಾಮೆ ನೀಡಿದ ನಂತರ, ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಅಧಿವೇಶನ ಆರಂಭಕ್ಕೆ ನೀಡಿದ್ದ ಆದೇಶವನ್ನು ಹಿಂಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.