ADVERTISEMENT

ಸುಸ್ತಿದಾರರ ವಿರುದ್ಧ ಕ್ರಮ: ರಾಹುಲ್ ಆರೋಪಕ್ಕೆ ನಿರ್ಮಲಾ ಸರಣಿ ಟ್ವೀಟ್ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2020, 17:43 IST
Last Updated 29 ಏಪ್ರಿಲ್ 2020, 17:43 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಸುಸ್ತಿದಾರರ ಪಟ್ಟಿಯಲ್ಲಿ ಆಡಳಿತಾರೂಢ ಪಕ್ಷದ ಮಿತ್ರರು ಇರುವುದರಿಂದಾಗಿಯೇ ಅದನ್ನು ಸಂಸತ್ತಿನಲ್ಲಿ ಬಿಡುಗಡೆ ಮಾಡಲಾಗಿಲ್ಲ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು 'ನಾಚಿಕೆ ಬಿಟ್ಟು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ನಿರ್ಮಲಾ ಸೀತಾರಾಮನ್ ಅವರು ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರು ನಾಚಿಕೆಯಿಲ್ಲದೆ ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್‌ನ ಚಾಳಿಯಂತೆ, ತಮಗೆ ಬೇಕಾದ ಅಂಶವನ್ನು ಮಾತ್ರ ಹೆಕ್ಕಿ ತೆಗೆದು, ಸತ್ಯಾಂಶಗಳಲ್ಲಿ ಕೋಲಾಹಲ ಸೃಷ್ಟಿಸುತ್ತಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳಿಗೆ ಈ ಕೆಳಗಿನ ಟ್ವೀಟ್‌ಗಳಲ್ಲಿ ಉತ್ತರ ನೀಡುತ್ತಿದ್ದೇನೆ" ಎಂದು ನಿರ್ಮಲಾ ಅವರು 13 ಟ್ವೀಟ್‌ಗಳ ಸರಣಿಯ ತಮ್ಮ ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ. ಇದು ಮಂಗಳವಾರ ರಾತ್ರಿಯೇ ಪೋಸ್ಟ್ ಆಗಿದೆ.

ADVERTISEMENT

ಮೆಹುಲ್ ಚೋಕ್ಸಿ, ವಿಜಯ ಮಲ್ಯ, ನೀರವ್ ಮೋದಿ ಮುಂತಾದವರ 68,607 ಕೋಟಿ ರೂ. ಸಾಲವನ್ನು ನರೇಂದ್ರ ಮೋದಿ ಸರ್ಕಾರ 'ಮನ್ನಾ' ಮಾಡಿದೆ ಎಂದು ಕಾಂಗ್ರೆಸ್ ಪಕ್ಷವು ಭಾರತೀಯ ರಿಸರ್ವ್ ಬ್ಯಾಂಕ್‌ನ ವರದಿಯನ್ನು ಉಲ್ಲೇಖಿಸಿ ಆರೋಪ ಮಾಡಿದ್ದರು. ಅಲ್ಲದೆ, ಪಟ್ಟಿಯಲ್ಲಿ ಬಿಜೆಪಿಯ 'ಸ್ನೇಹಿತರು' ಇದ್ದುದರಿಂದಾಗಿ ಹಣಕಾಸು ಸಚಿವರು ನನ್ನ ಪ್ರಶ್ನೆಗೆ ಉತ್ತರವನ್ನೇ ನೀಡಿಲ್ಲ ಎಂದು ಸ್ವತಃ ರಾಹುಲ್ ಗಾಂಧಿ ಆರೋಪಿಸಿದ್ದರು.

"ಸುಸ್ತಿದಾರರು, ಕೆಟ್ಟ ಸಾಲಗಳು ಮತ್ತು ಸಾಲ ಮೊತ್ತವನ್ನು ಲೆಕ್ಕಪತ್ರದಿಂದ ತೆಗೆದುಹಾಕಿರುವ 'ರೈಟಿಂಗ್ ಆಫ್' ಬಗ್ಗೆ ಕಾಂಗ್ರೆಸ್ ನಾಯಕರು ಜನರ ಹಾದಿ ತಪ್ಪಿಸಲು ಪ್ರಯತ್ನಿಸಿದ್ದಾರೆ. 2009-10 ಹಾಗೂ 2013-14ರ ನಡುವೆ, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು 145226 ಕೋಟಿ ರೂ. ಮೊತ್ತವನ್ನು ಲೆಕ್ಕಪತ್ರದಿಂದ ತೆಗೆದುಹಾಕಿವೆ. ಈ ರೈಟಿಂಗ್ ಆಫ್ ಎಂದರೇನು ಎಂಬುದನ್ನು ಡಾ.ಮನಮೋಹನ್ ಸಿಂಗ್ ಅವರಿಂದಲಾದರೂ ರಾಹುಲ್ ಗಾಂಧಿ ಕೇಳಿ ತಿಳಿದುಕೊಳ್ಳಬೇಕಿತ್ತು" ಎಂದು ಒಂದು ಟ್ವೀಟ್‌ನಲ್ಲಿ ನಿರ್ಮಲಾ ಬರೆದಿದ್ದಾರೆ.

ಯುಪಿಎ ಅವಧಿಯ ಸಾಲಗಳು
ಬ್ಯಾಂಕಿನ ಅನುಮತಿಯಿಲ್ಲದೆಯೇ ಪಾವತಿಸುವ, ನಿಧಿಗಳನ್ನು ವರ್ಗಾಯಿಸುವ ಅಥವಾ ಭದ್ರತಾ ಆಸ್ತಿಗಳ ವಿಲೇವಾರಿಯ ಸಾಮರ್ಥ್ಯವಿದ್ದರೂ ಸಾಲ ಮರುಪಾವತಿ ಮಾಡದೇ ಇರುವ ತಪ್ಪಿತಸ್ಥರನ್ನು ಸುಸ್ತಿದಾರರು ಎಂದು ವರ್ಗೀಕರಿಸಲಾಗುತ್ತದೆ. ಇವರೆಲ್ಲರೂ ಯುಪಿಎ (ಸರ್ಕಾರ) ಅವಧಿಯ 'ಫೋನ್ ಬ್ಯಾಂಕಿಂಗ್'ನಿಂದ ಲಾಭ ಪಡೆದವರೇ ಆಗಿದ್ದಾರೆ ಎಂದು ನಿರ್ಮಲಾ ಹೇಳಿದ್ದಾರೆ.

ಅಲ್ಲದೆ, ದೊಡ್ಡ ಮೊತ್ತದ ಈ ರೀತಿಯ 'ಕೆಟ್ಟ' ಸಾಲಗಳು 2006-2008ರ ಅವಧಿಯಲ್ಲೇ ಆರಂಭವಾಗಿದ್ದವು ಎಂಬ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ ರಾಜನ್ ಹೇಳಿಕೆಯನ್ನೂ ಅವರು ಉಲ್ಲೇಖಿಸಿದ್ದಾರೆ.

ಇದಲ್ಲದೆ ಪ್ರಮುಖವಾಗಿ ಮೆಹುಲ್ ಚೋಕ್ಸಿ, ವಿಜಯ ಮಲ್ಯ ಅವರ ಪ್ರಕರಣಗಳ ಬಗ್ಗೆ ನಿರ್ಮಲಾ ಮಾಹಿತಿ ನೀಡಿದ್ದು, ಈ ಸುಸ್ತಿದಾರರ ವಿರುದ್ಧ ನರೇಂದ್ರ ಮೋದಿ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವ್ಯವಸ್ಥೆಯನ್ನು ಸ್ವಚ್ಛಗೊಳಿಸುವಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಯಾಕೆ ವಿಫಲವಾಯಿತು ಎಂಬುದರ ಆತ್ಮವಿಮರ್ಶೆಗೆ ಇದು ಸಕಾಲ ಎಂದು ಹೇಳುವ ಮೂಲಕ ನಿರ್ಮಲಾ ತಮ್ಮ ಟ್ವೀಟ್ ಸರಣಿಯನ್ನು ಮುಕ್ತಾಯಗೊಳಿಸಿದ್ದು, 'ಅಧಿಕಾರದಲ್ಲಿರಲಿ, ಪ್ರತಿಪಕ್ಷದಲ್ಲೇ ಇರಲಿ, ಭ್ರಷ್ಟಾಚಾರ ಮತ್ತು ಪಕ್ಷಪಾತತನ ನಿಲ್ಲಿಸಲು ಯಾವತ್ತಾದರೂ ಕಾಂಗ್ರೆಸ್ ಪಕ್ಷವು ಬದ್ಧತೆ ತೋರಿಸಿದೆಯೇ ಅಥವಾ ಮನಸ್ಸಾದರೂ ಮಾಡಿದೆಯೇ' ಎಂದು ಪ್ರಶ್ನಿಸಿದ್ದಾರೆ.

ನೀರವ್, ಚೋಕ್ಸಿ, ಮಲ್ಯರಿಂದ ಎಷ್ಟು ಮುಟ್ಟುಗೋಲು?
ನೀರವ್ ಮೋದಿ ಪ್ರಕರಣ: 2387 ಕೋಟಿ ರೂ.ಗೂ ಮಿಕ್ಕಿದ ಸ್ಥಿರ ಹಾಗೂ ಚರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ/ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. (1898 ಕೋಟಿ ಮುಟ್ಟುಗೋಲು ಹಾಗೂ 489.75 ಕೋಟಿ ವಶ). ಇದರಲ್ಲಿ 961.47 ಕೋಟಿ ರೂ. ಮೌಲ್ಯದ ವಿದೇಶಿ ಸೊತ್ತುಗಳು, 53.45 ಕೋಟಿ ಮೌಲ್ಯದ ಐಷಾರಾಮಿ ವಸ್ತುಗಳ ಹರಾಜು ಮಾಡಲಾಗಿದ್ದು, ಆತ ಈಗ ಯುಕೆ ಜೈಲಿನಲ್ಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮೆಹುಲ್ ಚೋಕ್ಸಿ ಪ್ರಕರಣ: 67.9 ಕೋಟಿ ರೂ. ವಿದೇಶೀ ಸೊತ್ತು ಸೇರಿದಂತೆ 1936.95 ಕೋಟಿ ರೂ. ಮುಟ್ಟುಗೋಲು. 597.75 ಕೋಟಿ ವಶ. ರೆಡ್ ನೋಟೀಸ್ ನೀಡಲಾಗಿದೆ. ಆಂಟಿಗುವಾಕ್ಕೆ ಗಡೀಪಾರು ಮನವಿ ಮಾಡಲಾಗಿದೆ. ಅವರನ್ನು ತಲೆಮರೆಸಿಕೊಂಡ ತಪ್ಪಿತಸ್ಥ ಎಂದು ಘೋಷಣೆಯ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ವಿಜಯ ಮಲ್ಯ ಪ್ರಕರಣ: 8040 ಕೋಟಿ ರೂ. ಮುಟ್ಟುಗೋಲು ಹಾಗೂ 1693 ಕೋಟಿ ರೂ. ವಶ. ವಶಪಡಿಸಿಕೊಂಡ ಅವಧಿಯಲ್ಲಿ ಶೇರುಗಳ ಮೌಲ್ಯ 1693 ಕೋಟಿ ರೂ. ತಲೆಮರೆಸಿಕೊಂಡ ತಪ್ಪಿತಸ್ಥ ಎಂದು ಘೋಷಿಸಲಾಗಿದ್ದು, ಗಡೀಪಾರಿಗೆ ಮನವಿ ಮಾಡಲಾಗಿದೆ. ಯುಕೆ ಹೈಕೋರ್ಟ್ ಕೂಡ ಗಡೀಪಾರಿಗೆ ಹಸಿರುನಿಶಾನೆ ನೀಡಿದೆ ಎಂದು ನಿರ್ಮಲಾ ಟ್ವೀಟ್ ಮಾಡಿದ್ದಾರೆ.

ಈ ಎಲ್ಲ ಸುಸ್ತಿದಾರರ ವಿರುದ್ಧ ನರೇಂದ್ರ ಮೋದಿ ಸರ್ಕಾರವೇ ಕ್ರಮ ಕೈಗೊಳ್ಳುತ್ತಿದೆ. 9967 ವಸೂಲಾತಿ ಪ್ರಕರಣಗಳು, 3515 ಎಫ್ಐಆರ್‌ಗಳು, ಅಲ್ಲದೆ ತಲೆಮರೆಸಿಕೊಂಡಿರುವವರ ಕುರಿತ ತಿದ್ದುಪಡಿ ಕಾಯಿದೆಯನ್ನೂ ಅನ್ವಯಿಸಲಾಗಿದೆ. ನೀರವ್, ಮೆಹುಲ್ ಮತ್ತು ಮಲ್ಯರಿಂದ ಒಟ್ಟು 18332.7 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ವಶಪಡಿಸಿಕೊಳ್ಳಲಾಗಿದೆ ಎಂದು ನಿರ್ಮಲಾ ವಿವರಿಸಿದ್ದಾರೆ.

ರಾಹುಲ್ ಪ್ರಶ್ನೆಗೆ ಸವಿವರ ಉತ್ತರ ನೀಡಲಾಗಿತ್ತು
ಉತ್ತರ ಕೊಟ್ಟಿಲ್ಲ ಎಂಬ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಿರ್ಮಲಾ, ಪ್ರಮುಖ 50 ಸುಸ್ತಿದಾರರಿಗೆ ಸಂಬಂಧಿಸಿದ ಬಾಕಿ ಇರುವ, ಲೆಕ್ಕಪತ್ರದಿಂದ ತೆಗೆದುಹಾಕಿರುವ ಮಾಹಿತಿ ಇರುವ, ಬ್ಯಾಂಕು-ವಾರು ಸಮಗ್ರ ವಿವರಗಳುಳ್ಳ ಉತ್ತರವನ್ನು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ 305ನೇ ಚುಕ್ಕೆ ಗುರುತಿನ ಪ್ರಶ್ನೆಗೆ ಈಗಾಗಲೇ 2020 ಮಾರ್ಚ್ 16ರಂದು ನೀಡಲಾಗಿದೆ ಎಂದೂ ನಿರ್ಮಲಾ ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು, 2019ರ ನವೆಂಬರ್ 18ರಂದು ಲೋಕಸಭೆಯಲ್ಲಿ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂ.52ಕ್ಕೆ ನೀಡಲಾದ ಉತ್ತರದಲ್ಲಿ ಕೂಡ, "ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ತಪ್ಪಿತಸ್ಥರು ಎಂದು ಗುರುತಿಸಲಾದವರ ಪಟ್ಟಿಯನ್ನೂ ನೀಡಲಾಗಿತ್ತು" ಎಂದೂ ನಿರ್ಮಲಾ ಹೇಳಿದ್ದಾರೆ.

*
ಸಾಲ ವಜಾ ಅಂದರೆ ಏನು ಎನ್ನುವುದನ್ನು ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಂದ ತಿಳಿದುಕೊಳ್ಳಲಿ.
–ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.