ADVERTISEMENT

ಒಂದು ಮತದ ಗೆಲುವೂ ಗೆಲುವೇ: ವಿಧಾನಸಭೆಯಲ್ಲಿ ತೇಜಸ್ವಿ ವಿರುದ್ಧ ನಿತೀಶ್‌ ವಾಗ್ದಾಳಿ

ಪಿಟಿಐ
Published 28 ನವೆಂಬರ್ 2020, 4:26 IST
Last Updated 28 ನವೆಂಬರ್ 2020, 4:26 IST
ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ತಾರಾಕಿಶೋರ್‌ ಪ್ರಸಾದ್‌
ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ತಾರಾಕಿಶೋರ್‌ ಪ್ರಸಾದ್‌   

ಪಟ್ನಾ: ಮಹಾಗಠಬಂಧನಕ್ಕಿಂತಲೂ ಕೇವಲ 12,270 ಮತಗಳನ್ನು ಗಳಿಸುವ ಮೂಲಕ ಎನ್‌ಡಿಎ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದೆ. ಇದನ್ನು ಗೆಲುವು ಎಂದು ಪರಿಗಣಿಸುವುದು ಹೇಗೆ ಎಂಬ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಹೇಳಿಕೆಗಳ ವಿರುದ್ಧ ತಿರುಗಿಬಿದ್ದಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ 'ಒಂದು ಮತದಿಂದ ಜಯ ಸಾಧಿಸುವುದೂ ಅಂತಿಮವಾಗಿ ಜಯವೇ ಆಗಿರಲಿದೆ,' ಎಂದು ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಾತನಾಡಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, 'ಒಂದು ವೇಳೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಯಾರಾದರೂ ಭಾವಿಸಿದರೆ, ಆ ಬಗ್ಗೆ ಅವರು ನ್ಯಾಯಾಲಯಕ್ಕೆ ಹೋಗಬಹುದು,' ಎಂದು ತಿಳಿಸಿದ್ದಾರೆ.

'ಒಂದು ಮತದ ಗೆಲುವು ಅಂತಿಮವಾಗಿ ವಿಜಯವೇ ಆಗಿರಲಿದೆ. ನಮಗೆ 125 (ಸ್ಥಾನಗಳು) ಲಭಿಸಿವೆ. 122 ಹೊಂದಿರುವ ಯಾರಾದರೂ ಸರ್ಕಾರ ರಚಿಸಬಹುದು. ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಅಕ್ರಮ ನಡೆದಿದೆ ಎಂದು ಯಾರಾದರೂ ಭಾವಿಸಿದರೆ ಅವರು ನ್ಯಾಯಾಲಯಕ್ಕೆ ಹೋಗಬಹುದು. ನ್ಯಾಯಾಲಯ ಅವರ ವಾದ ಆಲಿಸಿ ತೀರ್ಪು ನೀಡಲಿದೆ,' ಎಂದು ಅವರು ವ್ಯಂಗ್ಯದ ಧಾಟಿಯಲ್ಲಿ ಹೇಳಿದರು.

ADVERTISEMENT

ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ್ದ ಪ್ರತಿಪಕ್ಷದ ನಾಯಕ, ಆರ್‌ಜೆಡಿಯ ತೇಜಸ್ವಿ ಯಾದವ್‌, 'ಎನ್‌ಡಿಎ ಮಹಾಗಠಬಂಧನಕ್ಕಿಂತಲೂ ಕೇವಲ 12,270 ಮತಗಳನ್ನು ಹೆಚ್ಚಾಗಿ ಪಡೆದು, 16 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲುವ ಮೂಲಕ ವಿಜಯಶಾಲಿ ಎಂದು ಹೇಳಿಕೊಳ್ಳುತ್ತಿದೆ,' ಎಂದು ವ್ಯಂಗ್ಯವಾಡಿದ್ದರು.

ತಾಳ್ಮೆ ಕಳೆದುಕೊಂಡ ನಿತೀಶ್‌

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ತೇಜಶ್ವಿ ಯಾದವ್‌ ಅವರ ಆರೋಪಗಳನ್ನು ಕೇಳಿ ತಾಳ್ಮೆ ಕಳೆದುಕೊಂಡರು. ಕೊಲೆ ಪ್ರಕರಣವೊಂದನ್ನು ಉಲ್ಲೇಖಿಸಿದ ತೇಜಸ್ವಿ ವಿರುದ್ಧ ಹರಿಹಾಯ್ದ ನಿತೀಶ್‌ಕುಮಾರ್‌, 'ತೇಜಸ್ವಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಅವರು ಹೇಳುತ್ತಿರುವುದು ಸುಳ್ಳು. ಅವರ ಮಾತುಗಳನ್ನು ನಾನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದೆ. ಯಾಕೆಂದರೆ ಅವರು ನನ್ನ ಸೋದರನಂತಿರುವ, ಸ್ನೇಹಿತನ ಮಗ. ನಾನು ಏನೂ ಹೇಳುವುದಿಲ್ಲ. ಅವರ ತಂದೆಯನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಿದ್ದು ಯಾರು? ಅವರಿಗೆ ಗೊತ್ತಿದೆಯೇ ಅದು? ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಯಾರು? ಅವರ ಮೇಲೆ ಆರೋಪಗಳು ಬಂದಾಗ ಸ್ಪಷ್ಟನೆಯೊಂದಿಗೆ ಬರುವಂತೆ ನಾನು ಹೇಳಿದೆ. ಆದರೆ, ಅವರು ಹಾಗೆ ಮಾಡಲಿಲ್ಲ. ಅದಕ್ಕಾಗಿಯೇ ನಾನು ಮೈತ್ರಿ ತೊರೆದೆ,' ಎಂದು ನಿತೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.