ಮಂಬೈ ದಾಳಿ ಮತ್ತು ರಾಣಾ
ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದ್ದು, ಜವಾಹರಲಾಲ್ ನೆಹರು(ಜೆಎಲ್‌ಎನ್) ಮೆಟ್ರೊ ನಿಲ್ದಾಣದ ಗೇಟ್ ಸಂಖ್ಯೆ 2 ಶುಕ್ರವಾರ ಸತತ ಎರಡನೇ ದಿನವೂ ಬಂದ್ ಆಗಿದೆ.
'ದೆಹಲಿ ಪೊಲೀಸರಿಂದ ಮುಂದಿನ ಸೂಚನೆ ಬರುವವರೆಗೂ ಜೆಎಲ್‌ಎನ್ ಮೆಟ್ರೊ ನಿಲ್ದಾಣದ ಗೇಟ್ ಸಂಖ್ಯೆ 2 ಮುಚ್ಚಿರುತ್ತದೆ' ಎಂದು ದೆಹಲಿ ಮೆಟ್ರೊ ರೈಲು ನಿಗಮದ (ಡಿಎಂಆರ್‌ಸಿ ) ವಕ್ತಾರರು ತಿಳಿಸಿದ್ದಾರೆ.
ಈ ದ್ವಾರವು ಎನ್‌ಐಎ ಪ್ರಧಾನ ಕಚೇರಿಗೆ ಹತ್ತಿರದಲ್ಲಿದೆ. ಗುರುವಾರ ರಾಣಾನನ್ನು ಅಮೆರಿಕದಿಂದ ಗಡೀಪಾರು ಮಾಡುವ ಮೊದಲು ಮುಚ್ಚಲಾಗಿತ್ತು. ಜೆಎಲ್‌ಎನ್ ಮೆಟ್ರೊ ನಿಲ್ದಾಣದ ಗೇಟ್ ಸಂಖ್ಯೆ-2 ಬಿಟ್ಟು, ಉಳಿದಂತೆ ಇತರ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಪ್ರಯಾಣಿಕರಿಗೆ ತೆರೆದಿರುತ್ತವೆ ಎಂದು ಡಿಎಂಆರ್‌ಸಿ ವಕ್ತಾರರು ಹೇಳಿದ್ದಾರೆ.
ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಪೂರ್ಣ ಸಂಚನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಎನ್‌ಐಎ, ರಾಣಾನನ್ನು ಶುಕ್ರವಾರ ತೀವ್ರ ವಿಚಾರಣೆಗೆ ಗುರಿಪಡಿಸಿದೆ. ವಿಶೇಷ ನ್ಯಾಯಾಲಯವು ಗುರುವಾರ ತಡರಾತ್ರಿ ರಾಣಾನನ್ನು ವಿಚಾರಣೆಗಾಗಿ 18 ದಿನಗಳ ಎನ್‌ಐಎ ಕಸ್ಟಡಿಗೆ ಒಪ್ಪಿಸಿತ್ತು. ಕಸ್ಟಡಿ ವಿಚಾರಣೆಗೆ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ಎನ್‌ಐಎ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್‌ಜೀತ್ ಸಿಂಗ್ ಅವರು ಗುರುವಾರ ತಡರಾತ್ರಿ 1ಕ್ಕೆ ರಾಣಾನನ್ನು ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದರು. ಅದರ ಬೆನ್ನಲ್ಲೇ ಆತನನ್ನು ಭಾರಿ ಭದ್ರತೆಯೊಂದಿಗೆ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಕೇಂದ್ರ ಕಚೇರಿಗೆ ಕರೆತರಲಾಗಿದೆ.
ರಾಣಾನನ್ನು ಎನ್‌ಐಎ ಕೇಂದ್ರ ಕಚೇರಿಯಲ್ಲೇ ವಿಚಾರಣೆಗೆ ಒಳಪಡಿಸಲಾಗುತ್ತದೆ. ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸ್ಥಳೀಯ ಪೊಲೀಸರು ಮತ್ತು ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎನ್‌ಐಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.