ADVERTISEMENT

ನವದೆಹಲಿ: ಅಪಘಾತವೆಂದು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಹುನ್ನಾರ

ಕಾರಿನಡಿ ಸಿಲುಕಿ 12 ಕಿ.ಮೀ ಸಾಗಿದ ಯುವತಿ ಮೃತದೇಹ: ದೆಹಲಿ ಪೊಲೀಸರ ವಿರುದ್ಧ ಆಕ್ರೋಶ 

ಪಿಟಿಐ
Published 2 ಜನವರಿ 2023, 14:40 IST
Last Updated 2 ಜನವರಿ 2023, 14:40 IST
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ಸುಲ್ತಾನ್‌ಪುರಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ 
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ಸುಲ್ತಾನ್‌ಪುರಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ    

ನವದೆಹಲಿ: ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹವನ್ನು ಸುಮಾರು 12 ಕಿ.ಮೀ.ವರೆಗೂ ಎಳೆದೊಯ್ದಿದ್ದ ಅಮಾನವೀಯ ಘಟನೆ ವಿರುದ್ಧ ದೆಹಲಿಯಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.

ಬಂಧನಕ್ಕೊಳಗಾಗಿರುವ ಐವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸುಲ್ತಾನ್‌ಪುರಿ ಪೊಲೀಸ್‌ ಠಾಣೆ ಎದುರು ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

‘ಯುವತಿ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಪೊಲೀಸರು ಇದನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಹೀಗಾಗಿಯೇ ಅಪಘಾತ ಪ್ರಕರಣವೆಂದು ಬಿಂಬಿಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದ್ದಾರೆ.

ADVERTISEMENT

ಘಟನೆ ಖಂಡಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ನಿವಾಸದ ಎದುರು ಪ್ರತಿಭಟನೆ ನಡೆಸಿ, ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ರಾಜ್‌ ನಿವಾಸದ ಎದುರು ಜಮಾಯಿಸಿದ್ದ ಸುಮಾರು 200 ಮಂದಿ ಕಾರ್ಯಕರ್ತರು ಸಕ್ಸೇನಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

‘ಭಾನುವಾರ ಬೆಳಗಿನ ಜಾವ ಖಂಜಾವಲಾ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನಡಿ ಯುವತಿಯ ಮೃತದೇಹ ಸಿಲುಕಿರುವುದನ್ನು ನೋಡಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಬಳಿಕ ಬೈಕ್‌ನಲ್ಲಿ ಕಾರು ಬೆನ್ನಟ್ಟಿದೆ. ಕಾರಿನ ಚಾಲಕ ಕೆಲ ಕಿ.ಮೀ ಸಾಗಿದ ಕೂಡಲೇ ತಿರುವು ಪಡೆಯುತ್ತಿದ್ದ. ಸುಮಾರು ಒಂದೂವರೆ ಗಂಟೆ ಆತ ಹೀಗೇ ಕಾರು ಚಲಾಯಿಸಿದ್ದ’ ಎಂದು ಪ್ರತ್ಯಕ್ಷದರ್ಶಿ ದೀಪಕ್‌ ಎಂಬುವರು ಹೇಳಿದ್ದಾರೆ.

‘ಆಹಾರ ಪೂರೈಸಿ ಮರಳುತ್ತಿದ್ದಾಗ ಖಂಜಾವಲಾ ರಸ್ತೆಯಲ್ಲಿ ಕಾರೊಂದು ಅತಿ ವೇಗವಾಗಿ ಸಾಗುತ್ತಿದ್ದುದನ್ನು ಕಂಡೆ. ಆ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು. ಅದನ್ನು ನೋಡಿದ್ದ ಚಾಲಕ ಏಕಾಏಕಿ ‘ಯೂ ಟರ್ನ್‌’ ತೆಗೆದುಕೊಂಡಿದ್ದ. ಆಗ ಕಾರಿನಡಿ ಯುವತಿಯ ತಲೆ ಕಾಣಿಸಿತ್ತು’ ಎಂದು ‘ಡೆಲಿವರಿ ಬಾಯ್‌’ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಖಂಜಾವಲಾ ಘಟನೆ ಅಪರೂಪದಲ್ಲೇ ಅಪರೂಪವಾದುದು. ನಾಗರಿಕ ಸಮಾಜ ನಾಚಿಕೆಪಡುವಂತಹದ್ದು. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿರಲಿ. ಅವರನ್ನು ಗಲ್ಲಿಗೇರಿಸಬೇಕು–ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ಘಟನೆಯು ಅಮಾನವೀಯವಾದುದು. ಇದು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಪ್ರಕರಣದ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು–ವಿ.ಕೆ.ಸಕ್ಸೇನಾ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.