ರೇಖಾ ಗುಪ್ತಾ
ನವದೆಹಲಿ: ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು ನೀಡುವ ಚುನಾವಣಾ ಭರವಸೆಯನ್ನು ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಲಿದೆ ಎಂದು ದೆಹಲಿ ನಿಯೋಜಿತ ಮುಖ್ಯಮಂತ್ರಿ ರೇಖಾ ಗುಪ್ತಾ ಗುರುವಾರ ಹೇಳಿದ್ದಾರೆ.
ಮಾರ್ಚ್ 8ರೊಗಳಗೆ ಮೊದಲ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡುವುದು ದೆಹಲಿಯ ಎಲ್ಲಾ 48 ಬಿಜೆಪಿ ಶಾಸಕರ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಆರ್ಥಿಕ ನೆರವು ಸೇರಿದಂತೆ ನಮ್ಮ ಎಲ್ಲಾ ಭರವಸೆಗಳನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಮಾರ್ಚ್ 8ರೊಳಗೆ ಮಹಿಳೆಯರ ಖಾತೆಗೆ ₹2,500 ಜಮೆಯಾಗಲಿದೆ’ ಎಂದು ಅವರು ಹೇಳಿದ್ದಾರೆ.
ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳೆಯರ ದಿನ ಆಚರಿಸಲಾಗುತ್ತದೆ.
ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಗುಪ್ತಾ ಅವರು ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದ್ದರು.
ಚುನಾವಣೆ ವೇಳೆ ಪಕ್ಷದ ಪ್ರಣಾಳಿಕೆ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ್ದ ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು, ಗರ್ಭಿಣಿಯರಿಗೆ ₹21,000 ನೆರವು, ಹಿರಿಯ ನಾಗರಿಕರಿಗೆ ₹2,500 ಪಿಂಚಣಿ ಮತ್ತು ಬಡವರಿಗೆ ₹500ಕ್ಕೆ ಅಡುಗೆ ಅನಿಲ ನೀಡುವುದಾಗಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.