ADVERTISEMENT

ಹಿಂದೂಗಳಿಗೆ ಮಸೀದಿಗಳನ್ನು ಬಿಟ್ಟುಕೊಡುವ ಮಾತೇ ಇಲ್ಲ: ಅಸಾದುದ್ಧೀನ್‌ ಓವೈಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2024, 10:55 IST
Last Updated 6 ಫೆಬ್ರುವರಿ 2024, 10:55 IST
<div class="paragraphs"><p>ಅಸಾದುದ್ದೀನ್‌ ಓವೈಸಿ</p></div>

ಅಸಾದುದ್ದೀನ್‌ ಓವೈಸಿ

   

ನವದೆಹಲಿ: ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ನೀಡಿರುವ ವಾರಾಣಸಿಯ ಜಿಲ್ಲಾ ನ್ಯಾಯಾಲಯದ ಆದೇಶ ಕುರಿತು ‌ಅಖಿಲ ಭಾರತ ಮಜ್ಲಿಸ್‌–ಇ–ಇತ್ತೆಹಾದ್‌ –ಉಲ್‌–ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ಧೀನ್‌ ಓವೈಸಿ ಪ್ರತಿಕ್ರಿಯಿಸಿದ್ದಾರೆ.

‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ‘ವಾರಾಣಸಿಯ ಜಿಲ್ಲಾ ಕೋರ್ಟ್‌ನ ಆದೇಶದಂತೆ ಮಸೀದಿ ಸ್ಥಳದ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ), ಅಲ್ಲಿ ದೇವಸ್ಥಾನದ ಕುರುಹುಗಳು ಇದ್ದವು ಎಂಬ ಅಂಶವನ್ನು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೂಗಳಿಗೆ ಯಾವುದೇ ಮಸೀದಿಗಳನ್ನು ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಜ್ಞಾನವಾಪಿ ಪ್ರಕರಣವು ಬಾಬರಿ ಮಸೀದಿಗಿಂತ ಭಿನ್ನವಾಗಿದೆ. ಏಕೆಂದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ’ ಎಂದಿದ್ದಾರೆ.

‘ಜ್ಞಾನವಾಪಿ ಪ್ರಕರಣ ಇನ್ನೂ ಕೊನೆಗೊಂಡಿಲ್ಲ. ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಮುಸ್ಲಿಮರು ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ ಎಂಬುದು ಕೆಲವರ ವಾದವಾಗಿತ್ತು. ಆದರೆ, ಜ್ಞಾನವಾಪಿಯಲ್ಲಿ ನಿರಂತರವಾಗಿ ನಾವು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ’ ಎಂದಿದ್ದಾರೆ.

‘ಮುಸ್ಲಿಮರಿಗೆ ಸಂಬಂಧಿಸಿದಂತೆ ನಾನು ಸಂಸತ್ತಿನಲ್ಲೂ ಹಲವು ಬಾರಿ ಮಾತನಾಡಿದ್ದೇನೆ. ಪ್ರಧಾನಿ ಮೋದಿ ಮೇಲೆ ನಮಗೆ ಯಾವುದೇ ವಿಶ್ವಾಸ ಉಳಿದಿಲ್ಲ. ಇದೇ ವಿಚಾರವನ್ನು ನಾನು ಮತ್ತೆ ಮತ್ತೆ ಪುನರುಚ್ಚರಿಸುತ್ತಿದ್ದೇನೆ. ಮೋದಿ ಅವರು ಒಂದು ನಿರ್ದಿಷ್ಟ ಸಿದ್ಧಾಂತಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ’ ಎಂದು ಓವೈಸಿ ಟೀಕಿಸಿದ್ದಾರೆ.

ಜನವರಿ 31ರಂದು (ಬುಧವಾರ) ವಾರಾಣಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.