ADVERTISEMENT

ಭಾರತದ ಮಾನವೀಯ ಮೌಲ್ಯಗಳಿಂದ 9/11 ನಂತಹ ದುರಂತಗಳಿಗೆ ಪರಿಹಾರ: ನರೇಂದ್ರ ಮೋದಿ

ಪಿಟಿಐ
Published 11 ಸೆಪ್ಟೆಂಬರ್ 2021, 8:43 IST
Last Updated 11 ಸೆಪ್ಟೆಂಬರ್ 2021, 8:43 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಅಹಮದಾಬಾದ್: 9/11ರ ಭಯೋತ್ಪಾದಕ ದಾಳಿಯಂತಹ ದುರಂತಗಳಿಗೆ ಭಾರತದ ಮಾನವೀಯ ಮೌಲ್ಯಗಳ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದೆಂದು ಜಗತ್ತು ಈಗ ಅರಿತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. 9/11 ದಿನಾಂಕವು ಮಾನವೀಯತೆ ಮೇಲೆ ನಡೆದ ದಾಳಿಯನ್ನು ನೆನಪಿಸುತ್ತದೆ ಮತ್ತು ಅದು ಜಗತ್ತಿಗೆ ಅನೇಕ ವಿಷಯಗಳನ್ನು ಕಲಿಸಿದೆ ಎಂದು ಅವರು ಹೇಳಿದರು.

ಉದ್ಯೋಗ ಆಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವ ಅಹಮದಾಬಾದ್‌ನ ಸರ್ದಾರ್‌ಧಾಮ್‌ ಭವನ ಸಂಕೀರ್ಣವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ನಂತರ ಮೋದಿ ಮಾತನಾಡಿದರು. ಅಲ್ಲದೆ, ಅವರು ಬಾಲಕಿಯರ ವಸತಿ ನಿಲಯವಾದ ಸರ್ದಾರ್ಧಂ ಹಂತ- II ಕನ್ಯಾ ಛತ್ರಾಲಯದ ಭೂಮಿ ಪೂಜೆಯನ್ನು ಕೂಡ ನೆರವೇರಿಸಿದರು.

ಇಂದು ಸೆಪ್ಟೆಂಬರ್ 11, ಅಂದರೆ 9/11, ಈ ದಿನಾಂಕವು ವಿಶ್ವದ ಇತಿಹಾಸದಲ್ಲಿ ಮಾನವೀಯತೆಯ ಮೇಲಿನ ದಾಳಿಗೆ ಹೆಸರುವಾಸಿಯಾಗಿದೆ. ಆದರೆ, ಇದೇ ದಿನಾಂಕವು ಇಡೀ ಜಗತ್ತಿಗೆ ಬಹಳಷ್ಟನ್ನು ಕಲಿಸಿದೆ. 1893ರ ಸೆಪ್ಟೆಂಬರ್ 11 ರಂದು ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ, ಸ್ವಾಮಿ ವಿವೇಕಾನಂದರು ಜಾಗತಿಕ ವೇದಿಕೆಯಲ್ಲಿ ನಿಂತು ಭಾರತದಲ್ಲಿನ ಮಾನವೀಯ ಮೌಲ್ಯಗಳನ್ನು ಪ್ರಪಂಚಕ್ಕೆ ಪರಿಚಯಿಸಿದರು' ಎಂದು ಅವರು ಹೇಳಿದರು.

'ಎರಡು ದಶಕಗಳಷ್ಟು ಹಳೆಯದಾದ 9/11 ನಂತಹ ದುರಂತಗಳಿಗೆ ಶಾಶ್ವತ ಪರಿಹಾರವು ಮಾನವೀಯ ಮೌಲ್ಯಗಳ ಮೂಲಕ ಸಿಗುತ್ತದೆ ಎಂಬುದನ್ನ ಜಗತ್ತು ಇಂದು ಅರಿತುಕೊಳ್ಳುತ್ತಿದೆ. ಅಲ್ಲದೆ, ಈ ಭಯೋತ್ಪಾದಕ ದಾಳಿಯಿಂದ ಕಲಿತ ಪಾಠಗಳನ್ನು ನೆನಪಿಟ್ಟುಕೊಳ್ಳಬೇಕಾದರೆ, ನಾವು ಕೂಡ ಪೂರ್ಣ ನಂಬಿಕೆಯಿಂದ ಮಾನವೀಯ ಮೌಲ್ಯಗಳಿಗಾಗಿ ಪ್ರಯತ್ನ ಮಾಡಬೇಕಾಗಿದೆ' ಎಂದು ತಿಳಿಸಿದರು.

ತಮಿಳು ಕವಿ ಸುಬ್ರಹ್ಮಣ್ಯ ಭಾರತಿ ಅವರ ಜಯಂತಿಯಂದು ತಮಿಳು ಅಧ್ಯಯನಕ್ಕಾಗಿ ಒಂದು ಪೀಠವನ್ನು ಸ್ಥಾಪಿಸುವುದಾಗಿ ಘೋಷಿಸಿದ ಮೋದಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಪೀಠವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

'ಇಂದು ಭಾರತದ ಮಹಾನ್ ವಿದ್ವಾಂಸ, ತತ್ವಜ್ಞಾನಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತಿಯವರ 100 ನೇ ಪುಣ್ಯತಿಥಿ. ಸರ್ದಾರ್ (ಪಟೇಲ್) ಸಾಹೇಬರ 'ಏಕ್ ಭಾರತ್ ಶ್ರೇಷ್ಠ ಭಾರತ' ದರ್ಶನದಂತೆ ಅದೇ ತತ್ವವು ಮಹಾಕವಿ ಭಾರತಿ ಅವರ ತಮಿಳು ಬರಹಗಳಲ್ಲಿ ಸಂಪೂರ್ಣ ದೈವತ್ವದಿಂದ ಮಿನುಗುತ್ತಿದೆ' ಎಂದು ತಿಳಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.