ADVERTISEMENT

ವಿಶ್ವ ಮಣ್ಣು ದಿನ–2025: ಈ ದಿನದ ಇತಿಹಾಸ, ಮಹತ್ವವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 5:28 IST
Last Updated 5 ಡಿಸೆಂಬರ್ 2025, 5:28 IST
<div class="paragraphs"><p>ಚಿತ್ರ:ಗೆಟ್ಟಿ&nbsp;</p></div>
   

ಚಿತ್ರ:ಗೆಟ್ಟಿ 

ಭೂಮಿ ಪಂಚಭೂತಗಳ ಸಮ್ಮಿಶ್ರಣ. ಗಾಳಿ, ನೀರು ಎಷ್ಟು ಮುಖ್ಯವೋ ಹಾಗೆ ಜೀವ ಸಂಕುಲ ಜೀವಿಸಲು ಮಣ್ಣು ಸಹ ಅಷ್ಟೇ ಅಗತ್ಯವಾಗಿದೆ. ಮಣ್ಣು ಸಸ್ಯ ರಾಶಿಗಳನ್ನು ಪೋಷಣೆ ಮಾಡುತ್ತದೆ. ಆದರೆ, ಪ್ರಸ್ತುತ ದಿನಗಳಲ್ಲಿ ಮಣ್ಣು ರಾಸಾಯನಿಕ, ಕೀಟನಾಶಕಗಳ ಅತಿಯಾದ ಬಳಕೆ, ಮಾಲಿನ್ಯ, ಕಾಡುಗಳ ನಾಶದಿಂದಾಗಿ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಅರಣ್ಯನಾಶದಿಂದ ಮಣ್ಣಿನ ಸವಕಳಿ ಉಂಟಾಗಿ ಮಣ್ಣಿನ ಫಲವತ್ತತೆ ನದಿ, ಸಮುದ್ರಗಳನ್ನು ಸೇರುತ್ತದೆ. 

ಇಂದಿಗೆ ಮಣ್ಣಿನ ಆರೋಗ್ಯ, ಫಲವತ್ತತೆ ಎರಡೂ ಅನಿವಾರ್ಯವಾಗಿವೆ. ಜನರಲ್ಲಿ ಮಣ್ಣಿನ ಆರೋಗ್ಯದ ಅನಿವಾರ್ಯತೆ ಹಾಗೂ ಅದರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಸೆಂಬರ್ 5ನ್ನು ವಿಶ್ವ ಮಣ್ಣಿನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 

ವಿಶ್ವ ಮಣ್ಣು ದಿನದ ಇತಿಹಾಸ: 

2002ರಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಾದ ‘ಇಂಟರ್‌ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ ಸೈನ್ಸ್’ (IUSS) ಮಣ್ಣಿನ ಗುಣಮಟ್ಟ ಕಾಪಾಡಲು ಹಾಗೂ ಮಣ್ಣಿನ ಸವಕಳಿಯನ್ನು ತಡೆಗಟ್ಟುವುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡಿಸೆಂಬರ್ 5 ಅನ್ನು ವಿಶ್ವ ಮಣ್ಣಿನ ದಿನವಾಗಿ ಆಚರಿಸುವ ಪ್ರಸ್ತಾಪ ಮಾಡಿತು.

ಆಹಾರ ಮತ್ತು ಕೃಷಿ ಸಂಸ್ಥೆ‌ (FAO) 2013ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 68ನೇ ಸಮ್ಮೇಳನದಲ್ಲಿ ವಿಶ್ವ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸಬೇಕು ಎನ್ನುವ ಪ್ರಸ್ತಾಪಕ್ಕೆ ಮನ್ನಣೆ ದೊರೆಯಿತು. ಇದರ ಫಲವಾಗಿ ಫಲವಾಗಿ ಪ್ರತಿ ವರ್ಷ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. 

ವಿಶ್ವ ಮಣ್ಣು ದಿನದ ಮಹತ್ವ: 

ಇದರ ಉದ್ದೇಶ ಮಣ್ಣು ಮನುಕುಲಕ್ಕೆ ಎಷ್ಟು ಅನಿವಾರ್ಯ ಎಂಬುದನ್ನು ತಿಳಿಸುವುದಾಗಿದೆ. ಅಲ್ಲದೇ ರಾಸಾಯನಿಕ ಗೊಬ್ಬರಗಳು, ಅರಣ್ಯನಾಶ, ತ್ಯಾಜ್ಯಗಳ ವಿಲೇಯವಾರಿ, ಪ್ಲಾಸ್ಟಿಕ್ ಮಣ್ಣಿಗೆ ಸೇರುತ್ತಿರುವುದು ಇವೆಲ್ಲವೂ ಮಣ್ಣನ್ನು ಕಲುಷಿತಗೊಳಿಸುತ್ತಿವೆ. ಇದರ ಬಗ್ಗೆ ಅರಿವು ಮೂಡಿಸುವುದೇ ಈ ಆಚರಣೆಯ ಉದ್ದೇಶವಾಗಿದೆ. 

ನಿಮಗಿದು ಗೊತ್ತಾ? 

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಅಂಕಿ ಅಂಶಗಳ ಪ್ರಕಾರ

  • ನಾವು ಸೇವಿಸುವ ಆಹಾರದ ಪೈಕಿ ಶೇ 95ರಷ್ಟು ಆಹಾರಗಳನ್ನು ಮಣ್ಣಿನಿಂದ ಪಡೆಯುತ್ತೇವೆ. 

  • ವಿಶ್ವದಾದ್ಯಂತ ಶೇ 33 ರಷ್ಟು ಮಣ್ಣು ಕಲುಷಿತವಾಗಿದೆ.

  • 2 ರಿಂದ 3 ಸೆಂ.ಮೀ. ಮಣ್ಣು ಉತ್ಪತ್ತಿಯಾಗಲು, ಕನಿಷ್ಟ 1 ಸಾವಿರ ವರ್ಷಗಳವರೆಗೆ ತೆಗೆದುಕೊಳ್ಳಬಹುದು.

  • ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ 18 ಪೋಷಕಾಂಶಗಳ ಪೈಕಿ 15  ಪೋಷಕಾಂಶಗಳನ್ನು ಮಣ್ಣು ಪೂರೈಸುತ್ತದೆ.

  • ಭೂಮಿಯ ಮೇಲಿರುವ ಜನಸಂಖ್ಯೆಗಿಂತ ಹೆಚ್ಚು ಜೀವಿಗಳು ಒಂದು ಚಮಚ ಮಣ್ಣಿನಲ್ಲಿವೆ.

  • ಸುಸ್ಥಿರ ಮಣ್ಣಿನ ನಿರ್ವಹಣೆಯಿಂದಾಗಿ ಶೇ 58ರಷ್ಟು ಹೆಚ್ಚಿನ ಆಹಾರ ಉತ್ಪಾದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.