ADVERTISEMENT

ವರ್ಷದ ಹಿನ್ನೋಟ: ಮನ ಕಲಕಿದ ದುರ್ಘಟನೆಗಳು

ಜೋಮನ್ ವರ್ಗಿಸ್
Published 29 ಡಿಸೆಂಬರ್ 2025, 0:54 IST
Last Updated 29 ಡಿಸೆಂಬರ್ 2025, 0:54 IST
ಪಹಲ್ಗಾಮ್‌ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆ ರೋಧಿಸುತ್ತಿರುವುದು
ಪಹಲ್ಗಾಮ್‌ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆ ರೋಧಿಸುತ್ತಿರುವುದು   

ಪಹಲ್ಗಾಮ್‌ ಭಯೋತ್ಪಾದನಾ ದಾಳಿ

ಭಾರತ ಭೂಶಿರ ಕಾಶ್ಮೀರದ ಪಹಲ್ಗಾಮ್‌ನ ಸುಂದರ ಬೈಸರನ್‌ ಕಣಿವೆಯಲ್ಲಿ ಏ‍ಪ್ರಿಲ್‌ 22 ರಂದು ಪ್ರಕೃತಿಯ ರಮಣೀಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಮೂವರು ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿ ಈ ವರ್ಷ ನಡೆದ, ದೇಶದ ಜನರು ಮರೆಯಲು ಸಾಧ್ಯವಾಗದ ಪ್ರಮುಖ ಕರಾಳ ಘಟನೆ. 

ಬಂಧೂಕುದಾರಿ ಭಯೋತ್ಪಾದಕರು, ಪ್ರವಾಸಿಗರ ಧರ್ಮ ಯಾವುದೆಂದು ಕೇಳಿ ತಿಳಿದು, ಪುರುಷರನ್ನು ಮಾತ್ರ ಗುರಿಯಾಗಿಸಿಕೊಂಡು ಮನಸೋಇಚ್ಛೆ ಗುಂಡು ಹಾರಿಸಿ 25 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ದಾಳಿಯನ್ನು ತಡೆಯಲು ಯತ್ನಿಸಿದ ಸ್ಥಳೀಯ ವ್ಯಕ್ತಿಯೊಬ್ಬರನ್ನೂ ಹಂತಕರು ಬಲಿ ಪಡೆದಿದ್ದರು. ಈ ಪ್ರಕರಣದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದವರು ಒಟ್ಟು 26 ಮಂದಿ. ಇದರಲ್ಲಿ ಕರ್ನಾಟಕದ ಶಿವಮೊಗ್ಗದ ಮಂಜುನಾಥ ರಾವ್‌ ಎಂಬುವವರೂ ಇದ್ದರು. 2008ರ ನವೆಂಬರ್‌ 26ರಂದು ನಡೆದಿದ್ದ ಮುಂಬೈ ದಾಳಿಯ ನಂತರ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಬಹುದೊಡ್ಡ ದಾಳಿ ಇದು.

ADVERTISEMENT

ದೆಹಲಿಯ ಕಾರು ಸ್ಫೋಟ

ನವೆಂಬರ್‌ 10ರಂದು ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪವೇ ಸಂಭವಿಸಿದ ಕಾರು ಸ್ಫೋಟ ಈ ವರ್ಷದ ನಡೆದ ಇನ್ನೊಂದು ಭಯೋತ್ಪಾದನಾ ಕೃತ್ಯ. ಇದರಲ್ಲಿ ಸ್ಥಳದಲ್ಲೇ 10 ಮಂದಿ ಮೃತಪಟ್ಟರು. ನಂತರದ ದಿನದಲ್ಲಿ ಈ ಸಂಖ್ಯೆ 15ಕ್ಕೆ ಏರಿತು. ವೈದ್ಯರನ್ನೊಳಗೊಂಡ ಭಯೋತ್ಪಾದಕರ ಜಾಲವು ಈ ಕೃತ್ಯ ಎಸಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ 

ಏರ್‌ ಇಂಡಿಯಾ ವಿಮಾನ ಪತನ

ಕಟ್ಟಟಕ್ಕೆ ಅಪ್ಪಳಿಸಿದ ಏರ್‌ ಇಂಡಿಯಾದ ಅವಶೇಷ

ಜೂನ್‌ 12ರಂದು ದೇಶದ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತವೊಂದು ನಡೆಯಿತು. ಅಂದು ಮಧ್ಯಾಹ್ನ 1.30ಕ್ಕೆ ಗುಜರಾತ್‌ನ ಅಹಮದಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಟೇಕ್‌ ಆಫ್‌ ಆದ ಕೆಲವೇ ಸೆಕೆಂಡುಗಳಲ್ಲಿ, ರನ್‌ ವೇಯಿಂದ ಕೂಗಳತೆ ದೂರದಲ್ಲಿ ಪತನವಾಯಿತು. ನೂಕು ಬಲದ ಕೊರತೆ ಅನುಭವಿಸಿದ ವಿಮಾನವು ವೈದ್ಯಕೀಯ ಕಾಲೇಜು ಮತ್ತು ಹಾಸ್ಟೆಲ್‌ ಕಟ್ಟಡಗಳಿಗೆ ಅಪ್ಪಳಿಸಿತು. ಇಬ್ಬರು ಪೈಲಟ್‌ ಸೇರಿ 12 ಮಂದಿ ಸಿಬ್ಬಂದಿ ಮತ್ತು 230 ಪ್ರಯಾಣಿಕರು ಏನು ನಡೆಯುತ್ತಿದೆ ಎಂದು ಅರಿಯುವಷ್ಟರಲ್ಲಿ ಸುಟ್ಟು ಕರಕಲಾದರು. ವಿಶ್ವಾಸ್ ಕುಮಾರ್‌ ರಮೇಶ್‌ ಎಂಬ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದರು. ವಿಮಾನವು ಬಿದ್ದ ಪ್ರಮಾಣ ಹಾಸ್ಟೆಲ್‌ ಕಟ್ಟಡದಲ್ಲಿದ್ದ ವೈದ್ಯ ವಿದ್ಯಾರ್ಥಿಗಳು ಸೇರಿ 19 ಮಂದಿ ಸಜೀವ ದಹನವಾದರು. 

ಇತರ ಪ್ರಮುಖ ದುರ್ಘಟನೆಗಳು

ಜ.6: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಗಣಿ ಪ್ರದೇಶಕ್ಕೆ ಕೆಸರು ಮಿಶ್ರಿತ ನೀರು ನುಗ್ಗಿ 9 ಸಿಬ್ಬಂದಿ ಮೃತಪಟ್ಟರು. ಅಕ್ರಮ ಗಣಿಗಾರಿಕೆ ದುರಂತಕ್ಕೆ ಕಾರಣ

ಜ.8: ಆಂಧ್ರಪ್ರದೇಶದ ತಿರುಪತಿಯಲ್ಲಿ ವೈಕುಂಠ ಏಕಾದಶಿ ವಿಶೇಷ ದರ್ಶನ ಟಿಕೆಟ್ ಪಡೆಯುವಾಗ ಆದ ಗೊಂದಲದಿಂದ ಕಾಲ್ತುಳಿತ ಉಂಟಾಗಿ 6 ಮಂದಿ ಮೃತಪಟ್ಟರು

ಜ.29: ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆ ದಿನ ಕಾಲ್ತುಳಿತ ಸಂಭವಿಸಿ 30 ಜನರ ಕೊನೆಯುಸಿರೆಳೆದರು

ಫೆ.15: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 18 ಪ್ರಯಾಣಿಕರು ಮೃತಪಟ್ಟರು. ಕುಂಭಮೇಳಕ್ಕೆ ತೆರಳಲು ಕಾಯುತ್ತಿದ್ದ ಸಾವಿರಾರು ಭಕ್ತರು ಒಮ್ಮೆಲೆ ಪ್ಲಾಟ್‌ಫಾರಂನತ್ತ ನುಗ್ಗಿದ್ದು ಇದಕ್ಕೆ ಕಾರಣ

ಫೆ.22: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ನಾಲೆ ಕಾಮಗಾರಿಯ ನಿರ್ಮಾಣ ಹಂತದ ಸುರಂಗ ಕುಸಿದು 8 ಕಾರ್ಮಿಕರು 

ಫೆ.28: ಉತ್ತರಾಖಂಡದ ಚಮೋಲಿ ಜಿಲ್ಲೆ ಮನಾದಲ್ಲಿ ಹಿಮಸ್ಪೋಟಕ್ಕೆ 8 ಮಂದಿ ಮೃತಪಟ್ಟರು

ಏ. 1: ಗುಜರಾತ್‌ನ ದೀಸಾ ಬಳಿ ಪಟಾಕಿ ತಯಾರಿಸುವ ಸ್ಫೋಟಕಗಳನ್ನು ಇರಿಸಿದ್ದ ಗೋಡೌನ್‌ನಲ್ಲಿ ಕಾಣಿಸಿಕೊಂಡ ಬೆಂಕಿಗೆ 21 ಮಂದಿ ಬಲಿಯಾದರು

ಏ.10: ಮಧ್ಯಪ್ರದೇಶದ ಗ್ವಾಲಿಯರ್‌ನ ಛಾರ್ವಿ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡು 10 ಮಂದಿ ಸಾವಿಗೀಡಾದರು

ಏ.30: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸೀಮಾಂಚಲ ದೇವಸ್ಥಾನದಲ್ಲಿ ಭಕ್ತರ ಮೇಲೆ ಗೋಡೆ ಕುಸಿದು 9 ಮಂದಿ ಮೃತಪಟ್ಟರು

ಮೇ 3: ಗೋವಾದ ಶಿರ್ಗಾವೊದಲ್ಲಿ ಶ್ರೀ ಲೈರಾಯಿ ದೇವಿ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಭಕ್ತರು ಕೊನೆಯುಸಿರೆಳೆದರು

ಮೇ 18: ಹೈದರಾಬಾದ್‌ನಲ್ಲಿ 125 ವರ್ಷ ಹಳೆಯ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದು 8 ಮಕ್ಕಳೂ ಸೇರಿ ಒಂದೇ ಕುಟುಂಬದ 17 ಮಂದಿ ಸಜೀವ ದಹನವಾದರು

ಜೂನ್ 30: ಸಂಗಾರೆಡ್ಡಿ ಜಿಲ್ಲೆಯಲ್ಲಿ ಸಿಗಾಚಿ ಇಂಡಸ್ಟ್ರೀಸ್ ರಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿ 54 ಕಾರ್ಮಿಕರು ಸಜೀವ ದಹನವಾದರು

ಜುಲೈ 9:ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಮಾಹಿ ನದಿ ಮೇಲೆ ನಿರ್ಮಿಸಿದ್ದ ಕಬ್ಬಿಣದ ಸೇತುವೆ ಕುಸಿದು 25 ಮಂದಿ ಸಾವು 

ಜುಲೈ 25: ಉತ್ತರಾಖಂಡದ ಹರಿದ್ವಾರದ ಮಾನಸ ದೇವಿ ದೇವಾಲಯಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ ಎಂಟು ಭಕ್ತರು ಸಾವಿಗೀಡಾಗಿದರು

ಜುಲೈ 25: ರಾಜಸ್ಥಾನದ ಪಿಪ್ಲೋಡಿಯಲ್ಲಿ ಶಾಲೆಯೊಂದರ ಚಾವಣಿ ಕುಸಿದು ಬಿದ್ದು 7 ವಿದ್ಯಾರ್ಥಿಗಳು ಸಾವಿಗೀಡಾದರು

ಆಗಸ್ಟ್ 5: ಉತ್ತರಾಖಂಡ್‌ನ ಉತ್ತರಕಾಶಿಯ ಧರಾಲಿ ಮತ್ತು ಹರ್ಸಿಲ್ ಗ್ರಾಮಗಳ ಬಳಿ ಸರೋವರದಲ್ಲಿ ಉಂಟಾದ ಮೇಘಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟರು

ಗಸ್ಟ್ 14: ಜಮ್ಮು-ಕಾಶ್ಮೀರದ ಕಿಶ್ತ್‌ವಾರದಲ್ಲಿ ಮೇಘಸ್ಫೋಟ ಉಂಟಾಗಿ 68 ಜನರು ಸಾವಿಗೀಡಾದರು

ಸೆ.27: ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಸಂಸ್ಥಾಪಕ, ನಟ ವಿಜಯ್ ಅವರು ಕರೂರಿನಲ್ಲಿ ಹಮ್ಮಿಕೊಂಡಿದ್ದ ರಾಜಕೀಯ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ 41 ಮಂದಿ ಜೀವತೆತ್ತರು

ಅ.14: ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊರಟಿದ್ದ ಹವಾನಿಯಂತ್ರಿತ ಖಾಸಗಿ ಸ್ಲೀಪರ್ ಬಸ್‌ಗೆ ಮಾರ್ಗಮಧ್ಯೆ ಬೆಂಕಿ ಹತ್ತಿಕೊಂಡು, ಅದರಲ್ಲಿದ್ದ 57 ಮಂದಿ ಪೈಕಿ 25 ಮಂದಿ ಸುಟ್ಟು ಕರಕಲಾದರು

ಅ.24: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಿನ್ನತೇಕೂರು ಬಳಿ ಮುಂಜಾನೆಯೇ ಬೆಂಗಳೂರಿನತ್ತ ಬರುತ್ತಿದ್ದ ಐಶಾರಾಮಿ ಖಾಸಗಿ ಬಸ್ ರಸ್ತೆಯಲ್ಲೇ ಹೊತ್ತಿ ಉರಿದು 19 ಪ್ರಯಾಣಿಕರು ಸಾವಿಗೀಡಾದರು

ನ.1: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸಂಭವಿಸಿದ ಅವಘಡದಲ್ಲಿ 9 ಮಂದಿ ಮೃತಪಟ್ಟರು

ನ.4: ಛತ್ತೀಸಗಢದ ಬಿಲಾಸ್ ಪುರದಲ್ಲಿ ಸರಕು ಸಾಗಣೆ ರೈಲು ಮತ್ತು ಪ್ರಯಾಣಿಕರ ರೈಲಿನ ನಡುವೆ ಡಿಕ್ಕಿ ಸಂಭವಿಸಿ 11 ಮಂದಿ ಅಸು ನೀಗಿದರು

ನ. 14: ಜಮ್ಮು-ಕಾಶ್ಮೀರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಳ್ಳಲಾದ ಸ್ಪೋಟಕದ ಮಾದರಿ ಸ್ಫೋಟಗೊಂಡು 9 ಮಂದಿ ಪೊಲೀಸರು ಸಾವಿಗೀಡಾದರು

ಡಿ.6: ಗೋವಾದ ಅರೊಪೊರಾ ರೊಮಿಯೋ ಲೇನ್ ನೈಟ್ ಕ್ಲಬ್ ಬ್ರಿಚ್‌ನಲ್ಲಿ ಬೆಂಕಿ ಕಾಣಿಸಿಕೊಂಡು 25 ಮಂದಿ ಸಜೀವ ದಹನವಾದರು

ಚಂಡಮಾರುತಗಳ ಅಬ್ಬರ

ಉತ್ತರಕಾಶಿ ಮೇಘಸ್ಫೋಟದ ರಕ್ಷಣಾ ಕಾರ್ಯಾಚರಣೆ

ಈ ವರ್ಷ ಭಾರತಕ್ಕೂ ಹಲವು ಚಂಡಮಾರುತಗಳು ಹೊಡೆತ ನೀಡಿದವು. ಅಕ್ಟೋಬರ್‌ನಲ್ಲಿ ಪೂರ್ವ ಕರಾವಳಿಗೆ ಮೋಂತಾ ಚಂಡಮಾರುತ ಅಪ್ಪಳಿಸಿತು. ಆಂಧ್ರ, ತೆಲಂಗಾಣ, ತಮಿಳುನಾಡು, ಒಡಿಶಾ ಹಾನಿ ಅನುಭವಿಸಿದವು. ಕನಿಷ್ಠ 10 ಮಂದಿ ಮೃತಪಟ್ಟು, ಸಾವಿರಾರು ಮಂದಿ ಸಂಕಷ್ಟ ಅನುಭವಿಸಿದರು. 

ನವೆಂಬರ್ ಅಂತ್ಯ ಡಿಸೆಂಬರ್ ಆರಂಭದಲ್ಲಿ ಶ್ರೀಲಂಕಾವನ್ನು ಕಾಡಿದ್ದ ‘ದಿತ್ವಾ’ ಚಂಡಮಾರುತ ಭಾರತವನ್ನೂ ಪ್ರವೇಶಿಸಿತ್ತು. ತಮಿಳುನಾಡು, ಪಾಂಡಿಚೇರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಿತು. ಜೀವಹಾನಿ ಜೊತೆಗೆ ಅಪಾರ ಬೆಳೆ ನಷ್ಟವೂ ಆಯಿತು

ಜಗತ್ತಿನಲ್ಲಿ...

ಜ.7: ಚೀನಾ ದಕ್ಷಿಣ ಭಾಗದ ಟಿಬೆಟ್ ಸ್ವಾಯತ್ತ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತು. ಚೀನಾದಲ್ಲಿ 126 ಜನರು ಮೃತಪಟ್ಟರೆ, ಟಿಬೆಟ್ ಮೂಲಗಳು ಅಂದಾಜು 400 ಜನರ ಸಾವು ಆಗಿದೆ ಎಂದು ತಿಳಿಸಿದವು

ಮಾ.28: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 5,456 ಮಂದಿ ಮೃತಪಟ್ಟರು. ಥಾಯ್ಲೆಂಡ್‌, ಆಗ್ನೇಯ ಚೀನಾ ಮತ್ತು ವಿಯೇಟ್ನಾಂಗಳಲ್ಲಿ ಭಾರಿ ಹಾನಿ ಸಂಭವಿಸಿತು

ಏ. 8: ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೊ ಡೊಮಿಂಗೊ ಜೆಟ್‌ಸೆಟ್ ನೈಟ್‌ಕ್ಲಬ್‌ನಲ್ಲಿ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮೇಲ್ಚಾವಣಿ ಕುಸಿದು 236 ಜನರು ಮೃತಪಟ್ಟರು

ಆ.31: ಅಫ್ಗಾನಿಸ್ತಾನದ ಕುನಾರ್‌ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿ 2100ಕ್ಕೂ ಹೆಚ್ಚು ಜನರು ಮೃತಪಟ್ಟರು

ಡಿ.16: ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಇಬ್ಬರು ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ 15 ಮಂದಿ ಸಾವಿಗೀಡಾದರು

ಆಂಧ್ರ ದುರಂತದಲ್ಲಿ ಹೊತ್ತಿ ಉರಿದ ಬಸ್‌
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ್ದ ಭೂಕಂಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.