ADVERTISEMENT

‘ಯೇತಿ’ ಹೆಜ್ಜೆಗುರುತು ಪತ್ತೆ!

ಟ್ವಿಟರ್‌ನಲ್ಲಿ ಚಿತ್ರ ಪ್ರಕಟಿಸಿದ ಭಾರತೀಯ ಸೇನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 19:27 IST
Last Updated 30 ಏಪ್ರಿಲ್ 2019, 19:27 IST
ಹೆಜ್ಜೆ ಗುರುತುಗಳು
ಹೆಜ್ಜೆ ಗುರುತುಗಳು   

ನವದೆಹಲಿ: ಕಾಲ್ಪನಿಕ ಪ್ರಾಣಿ ‘ಯೇತಿ’ಯ ಹೆಜ್ಜೆಗುರುತುಗಳನ್ನು ಹಿಮಾಲಯ ಶಿಖರಗಳಲ್ಲಿ ಪತ್ತೆ ಹಚ್ಚಿರುವುದಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಪರ್ವತಾರೋಹಣ ತಂಡವೊಂದು ಹೇಳಿಕೊಂಡಿದೆ.

ಸೋಮವಾರ ಈ ಚಿತ್ರಗಳನ್ನು ಭಾರತೀಯ ಸೇನೆ, ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಈ ಹೆಜ್ಜೆಯೊಂದರ ಉದ್ದ 32 ಇಂಚಿದ್ದರೆ, ಅಗಲ 15 ಇಂಚಿದೆ. ಈ ಛಾಯಾಚಿತ್ರಗಳಲ್ಲಿ ಹೆಜ್ಜೆ ಗುರುತು ಸ್ಪಷ್ಟವಾಗಿ ಕಾಣುತ್ತಿದ್ದು, ಒಂದೇ ಪಾದದ ಚಿತ್ರಗಳಿವೆ.

‘ಕಾಲ್ಪನಿಕ ದೈತ್ಯ ಪ್ರಾಣಿಯ ಹೆಜ್ಜೆಗುರುತುಗಳನ್ನು ನೇಪಾಳದ ಮಕಾಲು ಬೇಸ್‌ ಕ್ಯಾಂಪ್‌ನಲ್ಲಿ ಏಪ್ರಿಲ್‌ 9ರಂದು ಪತ್ತೆ ಹಚ್ಚಲಾಗಿದೆ’ ಎಂದೂ ಸೇನೆ ಹೇಳಿದೆ. ಮೇಜರ್‌ ಮನೋಜ್‌ ಜೋಶಿ ನೇತೃತ್ವದಲ್ಲಿ 18 ಜನ ಸಿಬ್ಬಂದಿಯನ್ನು ಒಳಗೊಂಡ ತಂಡ ನೇಪಾಳದ ಮೌಂಟ್‌ ಮಕಾಲು ಎಂಬಲ್ಲಿ ಏಪ್ರಿಲ್‌ 2ರಂದು ಶಿಖರಾರೋಹಣ ಆರಂಭಿಸಿದೆ.

ADVERTISEMENT

‘ಯೇತಿ ಈ ಪ್ರದೇಶದಲ್ಲಿ ಹಾದು ಹೋಗಿರುವ ಕುರಿತು 10 ದಿನಗಳ ಹಿಂದೆಯೇ ಮಾಹಿತಿ ಸಿಕ್ಕಿತ್ತು. ಆದರೆ, ಈ ವಿಷಯವನ್ನು ನಾವು ಬಹಿರಂಗಪಡಿಸಲಿಲ್ಲ. ಈಗ ಹೆಜ್ಜೆ ಗುರುತುಗಳ ಛಾಯಾಚಿತ್ರಗಳು ಲಭಿಸಿರುವುದು ಯೇತಿ ಅಸ್ತಿತ್ವಕ್ಕೆ ಸಂಬಂಧಿಸಿ ಸೈದ್ಧಾಂತಿಕ ವಾದಕ್ಕೆ ಪೂರಕ ಸಾಕ್ಷಿ ಎಂಬಂತಿವೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಈ ವಿಷಯದಲ್ಲಿ ಆಸಕ್ತಿ ಉದ್ದೀಪಿಸುವ ಉದ್ದೇಶದಿಂದ ಈ ಛಾಯಾಚಿತ್ರಗಳನ್ನು ಟ್ವೀಟ್‌ ಮಾಡಿದೆವು’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಯೇತಿ ಎಂಬ ಹಿಮಮಾನವನ ಅಸ್ತಿತ್ವವನ್ನು ಒಪ್ಪದವರಿಗೆ ಈ ಛಾಯಾಚಿತ್ರಗಳು ಖಂಡಿತ ಉತ್ತರ ನೀಡುತ್ತವೆ. ನಮ್ಮ ಬಳಿ ವಿಡಿಯೊ ಸಹ ಇದ್ದು, ಶೀಘ್ರವೇ ಅದನ್ನು ಬಿಡುಗಡೆ ಮಾಡಲಿದ್ದೇವೆ’ ಎಂದೂ ಹೇಳಿದ್ದಾರೆ.

ಹಿಮಾಲಯ ಶಿಖರಗಳಲ್ಲಿ ಯೇತಿ ಕಾಣಿಸಿಕೊಂಡಿದ್ದನ್ನು ಪ್ರತಿಪಾದಿಸುವ ಹಲವಾರು ವರದಿಗಳು ಪ್ರಕಟವಾಗಿವೆ. ಭಾರತೀಯ ವಿಜ್ಞಾನಿಗಳು ಸಹ ವರದಿ ಪ್ರಕಟಿಸಿದ್ದು, ಯಾವ ವರದಿಗಳೂ ಈ ವರೆಗೆ ದೃಢಪಟ್ಟಿಲ್ಲ. ಯೇತಿಯವು ಎಂದು ನಂಬಲಾಗಿದ್ದ ಹೆಜ್ಜೆಗುರುತುಗಳು ವಾಸ್ತವದಲ್ಲಿ ಹಿಮಕರಡಿಯವು ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.