ಯೋಗಿ ಆದಿತ್ಯನಾಥ್ ಹೋಳಿ ಆಚರಣೆ
– ಎಕ್ಸ್ ಚಿತ್ರ
ಗೋರಖಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ, ಗೋರಖ ಪೀಠಾಧೀಶ್ವರ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಗೋರಖನಾಥ ದೇಗುಲದಲ್ಲಿ ಹೋಳಿ ಆಚರಿಸಿದರು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಗೋರಖನಾಥ ದೇಗುಲದ ಮೇಳ ಮೈದಾನಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಹೋಳಿಕವನ್ನು ಸುಟ್ಟರಲ್ಲದೆ, ವೈದಿಕ ಮಂತ್ರ ಪಠಿಸಿ ಭಸ್ಮಕ್ಕೆ ಪೂಜೆ ಸಲ್ಲಿಸಿ, ಆರತಿ ನೆರವೇರಿಸಿದರು. ಈ ಆಚರಣೆ ಬಳಿಕ ಸ್ವಾಮಿಗಳು ಹಾಗೂ ಭಕ್ತರು ಯೋಗಿ ಅದಿತ್ಯನಾಥ್ ಅವರ ಹಣೆಗೆ ಭಸ್ಮ ಹಚ್ಚಿ ಆಶೀರ್ವಾದ ಪಡೆದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಹೋಳಿಕ ದಹನದ ಸ್ಥಳದಿಂದ ಆದಿತ್ಯನಾಥ್ ಅವರು ಶ್ರೀನಾಥ್‌ಜಿ ದೇಗುಲಕ್ಕೆ ಭೇಟಿ ನೀಡಿದರು. ಅಲ್ಲಿ ಭಕ್ತಾಧಿಗಳಿಗೆ ಭಸ್ಮ ವಿತರಿಸಿದರು. ಶ್ರೀನಾಥ್‌ಜಿ ದೇವಾಲಯದ ವೇದಿಕೆಯಲ್ಲಿ ಆಯೋಜಿಸಲಾದ ಗಾಯನ ಕಾರ್ಯಕ್ರಮವನ್ನು ಅವರು ಆನಂದಿಸಿದರು ಎಂದು ಅದು ಹೇಳಿದೆ.
ಬಳಿಕ ದೇಗುಲದ ಗೋಶಾಲೆಗೆ ಭೇಟಿ ನೀಡಿ, ಅವುಗಳಿಗೆ ಭಸ್ಮ ಹಾಗೂ ಬಣ್ಣ ಹಚ್ಚಿದರು. ಅವುಗಳಿಗೆ ಬೆಲ್ಲ ತಿನ್ನಿಸಿದರು. ಸ್ಥಳದಲ್ಲಿ ಓಡಾಡುತ್ತಿದ್ದ ನವಿಲು ಹಾಗೂ ಬಾತುಕೋಳಿಗಳಿಗೆ ಧಾನ್ಯಗಳನ್ನು ಹಾಕಿದರು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.