ಜ್ಯೋತಿ ರಾಣಿ
Credit: X
ಚಂಡೀಗಢ: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೇ 16ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರ ಮುಂದೆ ಎಲ್ಲ ವಿಚಾರಗಳನ್ನು ಹೇಳಿರುವ ಜ್ಯೋತಿ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಜ್ಯೋತಿ ಅವರನ್ನು ಐದು ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಸಿಬ್ಬಂದಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಅವರೊಂದಿಗೆ ಜ್ಯೋತಿ ಸಂಪರ್ಕ ಹೊಂದಿದ್ದರು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್ ಅವರನ್ನು ಕೇಂದ್ರ ಸರ್ಕಾರವು ಇದೇ ಮೇ 13ರಂದು ಗಡೀಪಾರು ಮಾಡಿತ್ತು.
ಜ್ಯೋತಿ ಯಾರು?: ‘ಟ್ರಾವೆಲ್ ವಿತ್ ಜ್ಯೋ’ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ಪ್ರವಾಸದ ವಿಡಿಯೊಗಳನ್ನು ಮಾಡುತ್ತಿದ್ದ ಜ್ಯೋತಿ ಅವರಿಗೆ 3.77 ಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ 1.33 ಲಕ್ಷ ಚಂದಾದಾರರಿದ್ದರು. ಪಾಕಿಸ್ತಾನದ ಪರವಾದ ಅಭಿಪ್ರಾಯ ಮೂಡಿಸುವಂತೆ ಜ್ಯೋತಿ ಅವರು ವಿಡಿಯೊಗಳನ್ನು ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.
‘ಇಂಡಿಯನ್ ಗರ್ಲ್ ಇನ್ ಪಾಕಿಸ್ತಾನ್’, ‘ಇಂಡಿಯನ್ ಗರ್ಲ್ ಎಕ್ಸ್‌ಪ್ಲೋರಿಂಗ್ ಪಾಕಿಸ್ತಾನ್’, ‘ಇಂಡಿಯನ್ ಗರ್ಲ್ ಅಟ್ ಕಟಾಸ್ ರಾಜ್ ಟೆಂಪಲ್’ ಮತ್ತು ‘ಇಂಡಿಯನ್ ಗರ್ಲ್ ಲೆಕ್ಸುರಿ ಬಸ್ ಇನ್ ಪಾಕಿಸ್ತಾನ್’ ಹೆಸರಿನ ವಿಡಿಯೊಗಳನ್ನು ಮಾಡಿದ್ದಾರೆ. ಈವರೆಗೆ ಜ್ಯೋತಿ ಅವರು ಸುಮಾರು 487 ವಿಡಿಯೊಗಳನ್ನು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.