ADVERTISEMENT

ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಗೀಳು: ರೈಲು ಪ್ರಯಾಣಿಕನ ಥಳಿಸಿದ್ದ ಯೂಟ್ಯೂಬರ್ ಬಂಧನ

ಏಜೆನ್ಸೀಸ್
Published 1 ಮಾರ್ಚ್ 2025, 7:27 IST
Last Updated 1 ಮಾರ್ಚ್ 2025, 7:27 IST
<div class="paragraphs"><p>ರೈಲು ಪ್ರಯಾಣಿಕನಿಗೆ ಥಳಿಸುತ್ತಿರುವ ದೃಶ್ಯ ಮತ್ತೊಂದು ಚಿತ್ರದಲ್ಲಿ ಆರೋಪಿ&nbsp;ರಿತೇಶ್ ಕುಮಾರ್‌</p></div>

ರೈಲು ಪ್ರಯಾಣಿಕನಿಗೆ ಥಳಿಸುತ್ತಿರುವ ದೃಶ್ಯ ಮತ್ತೊಂದು ಚಿತ್ರದಲ್ಲಿ ಆರೋಪಿ ರಿತೇಶ್ ಕುಮಾರ್‌

   

Credit: X/@RPF_INDIA

ನವದೆಹಲಿ: ಇಂಟರ್‌ನೆಟ್‌ನಲ್ಲಿ ಖ್ಯಾತಿ ಗಳಿಸುವುದು ಮತ್ತು ಫಾಲೋವರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಿಹಾರದ ಯೂಟ್ಯೂಬರ್‌ರೊಬ್ಬರು ರೈಲು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ADVERTISEMENT

ಬಿಹಾರದ ಅನುಗ್ರಹ ನಾರಾಯಣ ರಸ್ತೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯೂಟ್ಯೂಬರ್‌ ರೈಲು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಚಲಿಸುತ್ತಿರುವ ರೈಲಿನ ಸಮೀಪ ಹೋಗುವ ಯೂಟ್ಯೂಬರ್‌, ಕಿಟಕಿ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕರೊಬ್ಬರಿಗೆ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಏನೂ ಆಗಿಲ್ಲ ಎಂಬಂತೆ ಜೋರಾಗಿ ಕೂಗಾಡುತ್ತ ಹೋಗಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊ ಆಧರಿಸಿ ಆರೋಪಿ ಯೂಟ್ಯೂಬರ್‌ ರಿತೇಶ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ‘ಎಕ್ಸ್‌’ನಲ್ಲಿ ಮಾಹಿತಿ ನೀಡಿದೆ. ಜತೆಗೆ, ಘಟನೆ ಬಗ್ಗೆ ಯೂಟ್ಯೂಬರ್‌ನಿಂದ ಕ್ಷಮೆಯಾಚಿಸಿರುವ ವಿಡಿಯೊವನ್ನು ಪೋಸ್ಟ್ ಮಾಡಿದೆ.

‘ನಾನು ಯೂಟ್ಯೂಬರ್, ಫಾಲೋವರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳಲು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತೇನೆ. ಹಾಗೆಯೇ ಈಚೆಗೆ ಅನುಗ್ರಹ ನಾರಾಯಣ ರಸ್ತೆಯ ರೈಲು ನಿಲ್ದಾಣಕ್ಕೆ ಹೋಗಿದ್ದ ವೇಳೆ ರೈಲು ಪ್ರಯಾಣಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದೆ. ಇದು ನನ್ನ ತಪ್ಪು, ಈ ರೀತಿ ತಪ್ಪನ್ನು ಮತ್ತೆ ಮಾಡುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ರಿತೇಶ್ ಕುಮಾರ್‌ ಕೇಳಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.