ಭದ್ರತಾ ಪಡೆ, ಯೂಸುಫ್ ಪಠಾಣ್
(ಚಿತ್ರ: ಪಿಟಿಐ, ಯೂಸುಫ್ ಪಠಾಣ್ ಇನ್‌ಸ್ಟಾಗ್ರಾಂ)
ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಾಕ ಪ್ರತಿಭಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಇದೇ ಜಿಲ್ಲೆಗೆ ಸೇರಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ಪೋಸ್ಟ್ ವಿಪಕ್ಷವಾದ ಬಿಜೆಪಿಯನ್ನು ಕೆರಳಿಸಿದೆ.
ಎರಡು ದಿನಗಳ ಹಿಂದೆ ಯೂಸುಫ್ ಪಠಾಣ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದರು. 'ನೆಮ್ಮದಿಯ ಮಧ್ಯಾಹ್ನ, ಒಳ್ಳೆಯ ಚಹಾ, ಪ್ರಶಾಂತವಾದ ವಾತಾವರಣ. ಈ ಕ್ಷಣವನ್ನು ಆನಂದಿಸುತ್ತಿದ್ದೇನೆ' ಎಂದು ಅಡಿಬರಹ ಹಾಕಿದ್ದರು.
ಮುರ್ಶಿದಾಬಾದ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪಠಾಣ್ ಅವರನ್ನು ಬಿಜೆಪಿ ನಾಯಕರು ಟೀಕೆಗೆ ಗುರಿಯಾಗಿಸಿದ್ದಾರೆ.
'ಬಂಗಾಳವು ಹೊತ್ತಿ ಉರಿಯುತ್ತಿದೆ. ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಪಡೆಯನ್ನು ನಿಯೋಜಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಪೊಲೀಸರು ಮೌನ ತಾಳಿದ್ದು, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರವು ರಾಜ್ಯದಲ್ಲಿ ಹಿಂಸಾಚಾರವನ್ನು ಉತ್ತೇಜಿಸುತ್ತಿದೆ. ಈ ಮಧ್ಯೆ ಸಂಸದ ಯೂಸುಫ್ ಪಠಾಣ್ ಚಹಾ ಕುಡಿಯುತ್ತಾ ಹಿಂದೂಗಳ ಹತ್ಯೆಯ ಕ್ಷಣಗಳನ್ನು ನೆನೆಯುತ್ತಿದ್ದಾರೆ. ಇದುವೇ ಟಿಎಂಸಿ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.
ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಯೂಸುಫ್ ಪಠಾಣ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಡಪಕ್ಷಗಳ ನಾಯಕರೂ ಪಠಾಣ್ ಅವರನ್ನು ಟೀಕಿಸಿದ್ದಾರೆ.
ಮುರ್ಶಿದಾಬಾದ್ ಜಿಲ್ಲೆಯ ಬಹರಾಂಪುರ ಕ್ಷೇತ್ರವನ್ನು ಯೂಸುಫ್ ಪಠಾಣ್ ಪ್ರತಿನಿಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.