ಗುವಾಹಟಿ: ಜನಪ್ರಿಯ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ಭಾರತ ಉತ್ಸವದ (ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್–ಎನ್‌ಇಐಎಫ್) ಆಯೋಜಕ ಶ್ಯಾಮಕಾನು ಮಹಾಂತ ಹಾಗೂ ಗರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಿಂಗಪುರದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಹಾಂತ ಅವರನ್ನು ಬಂಧಿಸಲಾಗಿದೆ. ಶರ್ಮಾ ಅವರನ್ನು ಗುರುಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ. ಬುಧವಾರ ಬೆಳಗಿನ ಜಾವ ಇಬ್ಬರನ್ನೂ ಗುವಾಹಟಿಗೆ ಕರೆತರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಶಾನ್ಯ ಭಾರತ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಜುಬೀನ್ ಸಿಂಗಪುರಕ್ಕೆ ತೆರಳಿದ್ದರು. ಸೆ.19ರಂದು ಅಲ್ಲಿ ಸ್ಕೂಬಾಡೈವಿಂಗ್ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದರು.
ಅವರ ಸಾವಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದರು.
ಸಿಂಗಪುರದಲ್ಲಿ ನಡೆದಿದ್ದ ಈಶಾನ್ಯ ಭಾರತ ಉತ್ಸವದ ಆಯೋಜಕರ ವಿರುದ್ಧ ಅಸ್ಸಾಂನಲ್ಲಿ 60ಕ್ಕೂ ಅಧಿಕ ದೂರುಗಳು ದಾಖಲಾಗಿರುವ ಕಾರಣ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ ಎಂದೂ ಅವರು ಹೇಳಿದ್ದರು.
ಮಹಾಂತ ಮತ್ತು ಶರ್ಮಾ ವಿರುದ್ಧ ಇಂಟರ್‌ಪೋಲ್ ಮೂಲಕ 'ಲುಕ್‌ಔಟ್ ನೋಟಿಸ್' ಹೊರಡಿಸಲಾಗಿದ್ದು, ಅಕ್ಟೋಬರ್ 6 ರೊಳಗೆ ಸಿಐಡಿ ಮುಂದೆ ಹಾಜರಾಗುವಂತೆ ಕೇಳಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.