ADVERTISEMENT

ರಾಮನಗರ: 28ನೇ ಗಾಳಿಪಟ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 20:04 IST
Last Updated 16 ಆಗಸ್ಟ್ 2016, 20:04 IST
28ನೇ ಗಾಳಿಪಟ ಉತ್ಸವದಲ್ಲಿ ಆಗಸದಲ್ಲಿ ಹಾರಿದ ಪಟ
28ನೇ ಗಾಳಿಪಟ ಉತ್ಸವದಲ್ಲಿ ಆಗಸದಲ್ಲಿ ಹಾರಿದ ಪಟ   

ರಾಮನಗರ:  ಇಲ್ಲಿನ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳು ಹಾಗೂ ಕರ್ನಾಟಕ ಜಾನ ಪದ ಅಕಾಡೆಮಿಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ 28ನೇ ಗಾಳಿಪಟ ಉತ್ಸವದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದ ಸ್ಪರ್ಧಿಗಳು ತಮ್ಮ ಪಟಗಳೊಂದಿಗೆ ಗಾಳಿ ಜೊತೆಗೆ ಪೈಪೋಟಿ ನಡೆಸಿದರು.

ಬಿಸಿಲೂ ಇಲ್ಲದ, ಮಳೆಯೂ ಬಾರದ ಆಹ್ಲಾದಕರ ವಾತಾವರಣದಲ್ಲಿ, ಬೆಟ್ಟಸಾಲುಗಳಿಂದ ಬೀಸಿ ಬರುತ್ತಿದ್ದ ಆಷಾಡದ ಗಾಳಿಯಲ್ಲಿ ಪಟ ಹಾರಿಸಲು ಪೈಪೋಟಿ ಏರ್ಪಟ್ಟಿತ್ತು. ಒಂದಕ್ಕೊಂದು ಚೆಂದನೆಯ ವಿನ್ಯಾಸದ ಪಟಗಳು ಪಟಪಟನೆ ಗರಿಗೆದರುತ್ತಾ ಆಗಸದಲ್ಲಿ ನರ್ತಿಸಿದವು.

ಕೆಲವು ಆರೇಳು ಅಡಿ ಅಗಲ, ಎತ್ತರವಾಗಿದ್ದರೆ, ಇನ್ನೂ ಕೆಲವು ಹತ್ತಾರು ಅಡಿ ಬಾಲ ಕಟ್ಟಿಕೊಂಡು ನಭಕ್ಕೆ ಜಿಗಿದಿದ್ದವು. ಬಹುತೇಕರು ಚಿಟ್ಟೆಗಳ ರೂಪದ ಪಟಗಳನ್ನು ಹೊತ್ತು ತಂದಿದ್ದರು. ಆಸ್ತಿಕರು ಹನುಮ, ಲಕ್ಷ್ಮಿ, ತಿರುಪತಿ ನಾಮದ ವಿನ್ಯಾಸ ಮಾಡಿಕೊಂಡು ಬಂದಿದ್ದರು.

ಭಾರತ ಮಾತೆ, ಅಶೋಕ ಚಕ್ರ, ಗಂಡಭೇರುಂಡ, ಬುಗರಿ, ಮಿಕ್ಕಿ ಮೌಸ್‌... ಹೀಗೆ ಏನೆಲ್ಲ ರೂಪಗಳ ಪಟ ಗಳು ಗಾಳಿಯಲ್ಲಿ ತೇಲಿದವು. ನಟ ಉಪೇಂದ್ರರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನನ್ನು ಬಿಂಬಿಸುವ ವೃತ್ತಾಕಾರದ ಪಟ  ಹೊತ್ತು ತಂದಿದ್ದರು.

ಕೆಲವರು ಸ್ಪರ್ಧೆಯೊಂದಿಗೆ ಸಾಮಾ ಜಿಕ ಜಾಗೃತಿ ಮೂಡಿಸಲು ಉತ್ಸವವನ್ನು ವೇದಿಕೆ ಯನ್ನಾಗಿಸಿ ಕೊಂಡರು. ಮರದ ಚಿತ್ರದೊಂದಿಗೆ ಬರೆದಿದ್ದ ‘ಮರ ಬೆಳೆಸಿ ಪರಿಸರ ಉಳಿಸಿ’, ಹಸುವಿನ ಚಿತ್ರದೊಂದಿಗೆ ಮೇಲಕ್ಕೇರಿದ್ದ ಪಟದಲ್ಲಿ ಬರೆದ ‘ಗೋಹತ್ಯೆ ಮಹಾಪಾಪ’, ಕನ್ನಡದ ಧ್ವಜದ ಮಾದರಿಯ ಪಟ ಮೇಲಿನ ‘ಕನ್ನಡಿಗರು ಹೃದಯವಂತರು’ ಸಾಲುಗಳು ಗಮನ ಸೆಳೆದವು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್ ಹಾಗೂ ಜಿಲ್ಲಾಧಿಕಾರಿ ಡಾ. ಬಿ.ಆರ್‌. ಮಮತಾ ಉತ್ಸವಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.