ADVERTISEMENT

‘ಶಿಕ್ಷಣ ಮಂತ್ರಿ ಆಗಿದ್ದಕ್ಕೆ ಅಪ್ಪನ ಹೊಗಳಿದವರು ಮಾಧ್ಯಮಗಳ ಎದುರು ಟೀಕಿಸಿದರು’

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 14:00 IST
Last Updated 7 ಜುಲೈ 2019, 14:00 IST
   

ಬೆಂಗಳೂರು: ಶಿಕ್ಷಣ ಇಲಾಖೆ ಸಚಿವರಾಗಿ ನನ್ನ ತಂದೆ ಹೊಣೆ ಹೊತ್ತ ದಿನ ವಿಧಾನಸೌಧದ ಬಳಿಯೇ ಅವರನ್ನು ಅಪ್ಪಿ ಮುದ್ದಾಡಿ, ಹೊಗಳಿದ್ದ ವಿಶ್ವನಾಥ್‌ ಅವರು, ರಾಜೀನಾಮೆ ನೀಡುವ ದಿನ ಮಾಧ್ಯಮಗಳ ಎದುರು ಬೇರೆಯದ್ದೇ ಮಾತಾಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀನಿವಾಸ್‌ ಅವರ ಪುತ್ರ ದುಶ್ಯಂತ್‌ ಶ್ರೀನಿವಾಸ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ.

"ಬಹಳ ಖುಷಿಯಾಯ್ತು ವಾಸು. ನನ್ಗೆ ವಿಷಯ ತಿಳಿತಿದ್ದಹಾಗೆ ತುಂಬಾ ಖುಷಿಯಾಯ್ತು. ನಿಮ್ಮ capacityಗೆ ತಕ್ಕ portfolio ಇದು. ಕೊನೆಗೂ ಸರಿಯಾದ ವ್ಯಕ್ತಿಯನ್ನೇ ಶಿಕ್ಷಣ ಮಂತ್ರಿಯಾಗಿ ಆಯ್ಕೆ ಮಾಡುದ್ರಲ್ಲ." ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಜೂನ್ 25ರಂದು ಅಧಿಕಾರ ವಹಿಸಿಕೊಂಡ ಶ್ರೀನಿವಾಸ್‌ ಅವರನ್ನು ಅದೇ ದಿನ ವಿಧಾನಸೌಧದಲ್ಲಿ ಭೇಟಿಯಾಗಿ, ತಬ್ಬಿ, ಸಂತೋಷದಿಂದ ಹರ್ಷ ವ್ಯಕ್ತಪಡಿಸಿದ ಮಾನ್ಯ ಹುಣಸೂರಿನ ಶಾಸಕರಾದ ವಿಶ್ವನಾಥ್ ರವರೇ, ಈಗ ಮಾಧ್ಯಮದ ಮುಂದೆ "ಸರಿಯಾದ ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡುವಲ್ಲಿ ಸಿಎಂ ವಿಫಲರಾಗಿದ್ದಾರೆ" ಎಂದು ಹೇಳುವುದರ ಮೂಲಕ ನಮ್ಮ ದೃಷ್ಟಿಯಲ್ಲಿ ನೀವು ತೀರಾ ಸಣ್ಣವರಾಗಿಬಿಟ್ಟಿರಿ ಸರ್,’ ಎಂದು ಅವರು ಹೇಳಿದ್ದಾರೆ.

ADVERTISEMENT

‘70 ವರ್ಷದ ನೀವು ಮತ್ತು 4 ದಶಕಗಳ ನಿಮ್ಮ ರಾಜಕೀಯ ಜೀವನ ನಮ್ಮಂಥ ಯುವಕರಿಗೆ ಮಾದರಿಯಾಗಬೇಕಿತ್ತು. ವಿಪರ್ಯಾಸ, ನೀವು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನೀವು ನಮ್ಮ ಬಗ್ಗೆ ಏನೇ ಟೀಕೆ ಮಾಡಿದರೂ ನಾವು ನಿಮಗೆ ಶುಭವನ್ನೇ ಹಾರೈಸುತ್ತೇವೆ. ಎಷ್ಟೇ ಆದರೂ ವಾಸಣ್ಣನ ರಕ್ತ ಅಲ್ವಾ, ಅದಿಕ್ಕೆ. ಭಗವಂತ ನಿಮಗೆ ಒಳ್ಳೆ ಆರೋಗ್ಯ, ಆಯಸ್ಸು ನೀಡಲಿ ಎಂದು ಆಶಿಸುತ್ತೇನೆ,’ ಎಂದು ಅವರು ಬರೆದುಕೊಂಡಿದ್ದಾರೆ..

ಎಚ್‌.ವಿಶ್ವನಾಥ್‌ ಅವರು ರಾಜೀನಾಮೆ ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ರಾಜಭವನದಿಂದ ಹೊರಬಂದು ಸರ್ಕಾರದ ವಿರುದ್ಧ ಗುಡುಗಿದ್ದರು. ಈ ವೇಳೆ ಶಿಕ್ಷಣ ಇಲಾಖೆಯನ್ನು ಸಿಎಂ ನಿರ್ಲಕ್ಷಿಸಿದರು, ಅದಕ್ಕೆ ಸೂಕ್ತ ಮಂತ್ರಿಯನ್ನು ನೇಮಕ ಮಾಡಲಿಲ್ಲ ಎಂದೂ ಅವರು ಟೀಕಿಸಿದ್ದರು. ಇದೇ ಹಿನ್ನೆಲೆಯಲ್ಲಿ ದುಶ್ಯಂತ್‌ ಶ್ರೀನಿವಾಸ್‌ ಈ ಪೋಸ್ಟ್‌ ಪ್ರಕಟಿಸಿದ್ದಾರೆ.

ಇನ್ನು ಈ ಕುರಿತು ಮಾತನಾಡಿರು ದುಶ್ಯಂತ್‌, ‘ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನ ವಿಶ್ವನಾಥ್‌ ಅವರು ನನ್ನ ತಂದೆಯನ್ನು ಭೇಟಿ ಮಾಡಿದ್ದರು. ಅಂದು ನನ್ನ ತಂದೆಗೆ ಅಭಿನಂದನೆ ಸಲ್ಲಿಸಿದ್ದರು. ಅಲ್ಲದೆ, ಶಿಕ್ಷಣ ಇಲಾಖೆಯನ್ನು ನನ್ನ ತಂದೆ ಸಮರ್ಥವಾಗಿ ನಿಭಾಯಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಇದಕ್ಕೆ ನಾನು ಪ್ರತ್ಯಕ್ಷ ಸಾಕ್ಷಿ. ನಮ್ಮ ಜತೆಗೆ ವಿಧಾನಪರಿಷತ್‌ ಸದಸ್ಯ ಕಾಂತರಾಜು ಅವರೂ ಇದ್ದರು. ಆದರೆ, ಅವರು ಮಾಧ್ಯಮಗಳ ಎದುರೇ ಬೇರೆಯ ಮಾತನಾಡಿದರು,’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.