ADVERTISEMENT

ಆರೋಪಿಗಳು ಬಾಂಬ್ ಸಿದ್ಧಪಡಿಸಿ, ತುಂಗಾ ದಡದಲ್ಲಿ ಸ್ಫೋಟಿಸಿದ್ದರು: ಎಸ್ಪಿ ಮಾಹಿತಿ

ರಾಷ್ಟ್ರಧ್ವಜ ಸುಟ್ಟ ವಿಡಿಯೊ ಮಾಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:48 IST
Last Updated 24 ಸೆಪ್ಟೆಂಬರ್ 2022, 5:48 IST
ಲಕ್ಷ್ಮೀಪ್ರಸಾದ್
ಲಕ್ಷ್ಮೀಪ್ರಸಾದ್   

ಶಿವಮೊಗ್ಗ: ನಿಷೇಧಿತ ಐಎಸ್ ಸಂಘಟನೆ ಜೊತೆ ನಂಟು ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳು ಬಾಂಬ್ ಸಿದ್ಧಪಡಿಸಿ ಇಲ್ಲಿನ ಗುರುಪುರ ಬಳಿಯ ತುಂಗಾ ನದಿ ದಂಡೆಯ ಕೆಮ್ಮನಗುಂಡಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ಪ್ರಾಯೋಗಿಕವಾಗಿ ಸ್ಫೋಟಿಸಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಇದೇ ವೇಳೆ ರಾಷ್ಟ್ರಧ್ವಜ ಸುಟ್ಟು ಅದನ್ನು ವಿಡಿಯೊ ರೆಕಾರ್ಡ್ ಮಾಡಿದ್ದರು. ವಿಧಿ ವಿಜ್ಞಾನ ತಜ್ಞರು ಸ್ಫೋಟಕ್ಕೆ ಸಂಬಂಧಿಸಿದ ಅವಶೇಷಗಳನ್ನು ಹಾಗೂ ಅರೆಬರೆ ಸುಟ್ಟ ತ್ರಿವರ್ಣ ಧ್ವಜ ಹಾಗೂ ವಿಡಿಯೊ ಸ್ಥಳದಿಂದ ಸಂಗ್ರಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐಎಸ್ ಸಂಘಟನೆ ಜೊತೆ ನಂಟು ಆರೋಪದ ಮೇಲೆ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಮಾಝ್ ಮುನೀರ್ ಅಹಮದ್, ಸೈಯದ್ ಯಾಸೀನ್ ಎಂಬುವವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಶಾರೀಕ್ ತಲೆಮರೆಸಿಕೊಂಡಿದ್ದಾನೆ.

ADVERTISEMENT

ಆರೋಪಿಗಳು ಟೆಲಿಗ್ರಾಂ ಆ್ಯಪ್ ಮೂಲಕ ಐಎಸ್ ಸಂಘಟನೆಯ ಅಧಿಕೃತ ಮಾಧ್ಯಮ ಅಲ್–ಹಯತ್‌ನ ಸದಸ್ಯರಾಗಿದ್ದರು. ಸಂಘಟನೆಯ ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಅಲ್ಲಿಂದಲೇ ಸ್ವೀಕರಿಸುತ್ತಿದ್ದರು.

ಎಲೆಕ್ಟ್ರಿಕ್ ಎಂಜಿನಿಯರ್ ಆಗಿರುವ ಸೈಯದ್ ಯಾಸೀನ್ ಬಾಂಬ್ ತಯಾರಿಕೆಯ ಬಗ್ಗೆ ಐಎಸ್‌ನಿಂದಲೇ ಮಾಹಿತಿ ಪಡೆದಿದ್ದನು. ಅದಕ್ಕೆ ಬೇಕಿರುವ ಟೈಮರ್ ರಿಲೆ ಸರ್ಕ್ಯೂಟ್‌ಗಳನ್ನು ಅಮೇಜಾನ್ ಮೂಲಕ ಖರೀದಿಸಿದ್ದರು. ಶಿವಮೊಗ್ಗ ನಗರದಲ್ಲಿ 9 ವೋಲ್ಟ್‌ನ ಎರಡು ಬ್ಯಾಟರಿ, ಸ್ವಿಚ್, ವೈರ್‌ಗಳು, ಮ್ಯಾಚ್‌ಬಾಕ್ಸ್ ಸೇರಿದಂತೆ ಉಳಿದ ವಸ್ತುಗಳನ್ನು ಖರೀದಿಸಿದ್ದರು ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದರಿಂದ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆ ಬಾಂಬ್ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು. ಈ ಹಂತದಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಬಾಂಬ್ ತಯಾರಿಸಲು ಬೇಕಾದ ಹಣವನ್ನು ಶಾರೀಕ್ ಆನ್‌ಲೈನ್‌ ಮೂಲಕ ಯಾಸೀನ್‌ಗೆ ಕಳುಹಿಸುತ್ತಿದ್ದನು. ಆರೋಪಿಗಳು ಪರಸ್ಪರ ಸಂಪರ್ಕಕ್ಕೆ ವಾಟ್ಸ್ಆ್ಯಪ್ ಬಳಸುತ್ತಿರಲಿಲ್ಲ. ಬದಲಿಗೆ ಟೆಲಿಗ್ರಾಂ, ಇನ್ಸ್ಟಾಗ್ರಾಂ, ವೈರ್, ಎಲಿಮೆಂಟ್, ವಿಕ್ಕರ್ ಬಳಸುತ್ತಿದ್ದರು ಎಂದು ಹೇಳಿದರು.

ಆರೋಪಿಗಳ ಬಂಧನದ ನಂತರ 11 ಸ್ಥಳಗಳಲ್ಲಿ ದಾಳಿ ನಡೆಸಿ 14 ಮೊಬೈಲ್‌ಫೋನ್, ಒಂದು ಡಾಂಗಲ್, ಎರಡು ಲ್ಯಾಪ್‌ಟಾಪ್, ಒಂದು ಪೆನ್‌ಡ್ರೈವ್, ಎಲೆಕ್ಟ್ರಾನಿಕ್ ಗಾಡ್ಜೆಟ್ಸ್‌ಗಳು, ಬಾಂಬ್ ಸ್ಫೋಟದ ಸ್ಥಳದಲ್ಲಿ ಛಿದ್ರಗೊಂಡ ಅವಶೇಷಗಳು, ರಿಲೆ ಸರ್ಕಿಟ್, ಬಲ್ಬ್‌ಗಳು, ಮ್ಯಾಚ್ ಬಾಕ್ಸ್, ವೈರ್‌, ಬ್ಯಾಟರಿಗಳು, ಸ್ಫೋಟಕ ವಸ್ತುಗಳು, ಅರೆಬರೆ ಸುಟ್ಟಿರುವ ರಾಷ್ಟ್ರಧ್ವಜ, ಪ್ರಮುಖ ದಾಖಲೆಗಳು ಹಾಗೂ ಶಾರೀಕ್ ಕೃತ್ಯಕ್ಕೆ ಬಳಸುತ್ತಿದ್ದ ಮಾರುತಿ ರಿಡ್ಜ್ ಕಾರು ವಶಪಡಿಸಿಕೊಳ್ಳಲಾಗಿದೆ ಎಂದರು.

‘ನಿಜವಾದ ಸ್ವಾತಂತ್ರ್ಯಕ್ಕೆ ಯುದ್ಧದ ಆಶಯ’
ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಬ್ರಿಟಿಷ್ ಆಡಳಿತದಿಂದ. ಆದರೆ, ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಈಗಿರುವ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಿ ಖಿಲಾಫತ್ ಸ್ಥಾಪಿಸಬೇಕಿದೆ. ಷರಿಯಾ ಕಾನೂನು ಜಾರಿಗೊಳಿಸಬೇಕಿದೆ. ತಮ್ಮ ಆಶಯಕ್ಕೆ ಅನುಗುಣವಾಗಿ ಐಎಸ್ ಕಾರ್ಯ ನಿರ್ವಹಿಸುತ್ತಿದೆ. ಇಸ್ಲಾಂ ಉನ್ನತಿಗೇರಿಸಲು ಜಿಹಾದ್ ಮೂಲಕ ಕಾಫಿರ್‌ಗಳ ವಿರುದ್ಧ ಯುದ್ಧ ಸಾರಬೇಕಿದೆ ಎಂಬ ವಿಚಾರವನ್ನು ಆರೋಪಿಗಳು ಹೊಂದಿದ್ದರು.

ಅದಕ್ಕೋಸ್ಕರ ಸ್ಫೋಟಕ ತಯಾರಿಗೆ ಮುಂದಾಗಿ ಸಾಮಗ್ರಿ ಸಂಗ್ರಹಿಸಿ ಇಟ್ಟುಕೊಂಡಿದ್ದರು ಎಂದು ಲಕ್ಷ್ಮೀಪ್ರಸಾದ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.