ADVERTISEMENT

ಗೋಮಾಳದತ್ತ ‘ಪ್ರಭಾವಿ’ ಕಣ್ಣು: ಆತಂಕದಲ್ಲಿ 25 ಲಕ್ಷ ಭೂರಹಿತ ಕುಟುಂಬ

ವಿಜಯಕುಮಾರ್ ಎಸ್.ಕೆ.
Published 2 ಫೆಬ್ರುವರಿ 2022, 20:34 IST
Last Updated 2 ಫೆಬ್ರುವರಿ 2022, 20:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಗೋಮಾಳ, ಹುಲ್ಲುಬನಿ, ಗಾಯರಾಣ, ಸೊಪ್ಪಿನಬೆಟ್ಟ ಸೇರಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನು ಗಳನ್ನು ಖಾಸಗಿ ಸಂಘ– ಸಂಸ್ಥೆಗಳಿಗೆ ಮಂಜೂರು ಮಾಡಲು ನೀತಿಯೊಂದನ್ನು ರೂಪಿಸಲು ಹೊರಟಿರುವ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.

ಗೋವು ಸೇರಿದಂತೆ ಜಾನುವಾರುಗಳಿಗೆ ಮೇವು ಸಿಗಬೇಕೆಂಬ ಕಾರಣಕ್ಕೆ ಹಿಂದೆ ಕೆಲವು ಭೂಮಿಯನ್ನು ಮೀಸಲಿಡಲಾಗಿದೆ. ಅದನ್ನು ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವೂ ಇರಲಿಲ್ಲ. ಕೃಷಿಗೆ ಪೂರಕವಾದ ಚಟುವಟಿಕೆಗೂ ಈ ಭೂಮಿ ನೆರವಾಗುತ್ತಿತ್ತು. ಒತ್ತುವರಿ ಹೆಚ್ಚಾದ ಬಳಿಕ ಗೋಮಾಳ, ಹುಲ್ಲುಬನಿಗೆ ಮೀಸಲಾದ ಭೂಮಿ ಪ್ರಮಾಣ ಕಡಿಮೆಯಾದರೂ ಸಂಪೂರ್ಣವಾಗಿ ಖಾಸಗಿ ಸಂಸ್ಥೆಗಳ ವಶಕ್ಕೆ ಹೋಗಿರಲಿಲ್ಲ. ಉಳಿದ ಅಷ್ಟಿಷ್ಟು ಭೂಮಿಯನ್ನು ಖಾಸಗಿಯವರಿಗೆ ಕೊಡಲು ಮುಂದಾಗಿರುವ ಸರ್ಕಾರದ ಧೋರಣೆಗೆ ವಿರೋಧ ಮೂಡಿದೆ.

ಇದರ ಜತೆಗೆ, ಇದೇ ಜಾಗಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ 25 ಲಕ್ಷಕ್ಕೂ ಹೆಚ್ಚು ಕುಟುಂಬದವರಿಗೆ ಆತಂಕವೂ ಕಾಡತೊಡಗಿದೆ.

ADVERTISEMENT

ಕೃಷಿಗೆ ಬೆನ್ನೆಲುಬಾಗಿರುವ ದನಕರುಗಳ ಮೇವಿಗೆ ಮೀಸಲಿಟ್ಟಿದ್ದ ಗೋಮಾಳ, ಹುಲ್ಲುಬನಿ ಮತ್ತು ಗಾಯರಾಣ ಜಾಗಗಳು ಈಗಾಗಲೇ ಕೃಷಿ ಭೂಮಿಯಾಗಿ ಪರಿವರ್ತನೆಯಾಗಿವೆ. ಕೆಲವರಿಗೆ ಜಾಗ ಮಂಜೂರಾಗಿದ್ದರೆ, ಬಹುತೇಕ ಹಳ್ಳಿಗಳಲ್ಲಿ ನಮೂನೆ 50, 53 ಮತ್ತು 57ರಲ್ಲಿ ಅರ್ಜಿ ಹಾಕಿಕೊಂಡು ಸಾಗುವಳಿ ಮಾಡುತ್ತಿರುವವರು ಮಂಜೂರಾತಿಗಾಗಿ ಕಾದಿದ್ದಾರೆ.

ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ದನ ಕರುಗಳಿಗೆ ಕಾಡಿನಿಂದ ಮೇವು ತರುವ ಜಾಗಗಳನ್ನು ಸೊಪ್ಪಿನಬೆಟ್ಟ ಎಂದು ಗುರುತಿಸಲಾಗಿತ್ತು. ಕೃಷಿಕರು ಇದನ್ನು ಸಾಮುದಾಯಿಕವಾಗಿ ಬಳಕೆ ಮಾಡುತ್ತಿದ್ದರು. ಇಲ್ಲಿಯೂ ಬಹುತೇಕ ಕಡೆ ಭೂಮಿ ಮತ್ತು ವಸತಿ ರಹಿತರು ಕೃಷಿ ಮಾಡುತ್ತಿದ್ದಾರೆ. ಮನೆಗಳನ್ನೂ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆ ಮತ್ತು ಗುಡಿಸಿಲು ನಿರ್ಮಿಸಿರುವವರು ನಮೂನೆ 94 ಸಿ(ಗ್ರಾಮೀಣ) ಮತ್ತು 94 ಸಿಸಿ (ನಗರ) ಅಡಿಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಇದೆಲ್ಲದರ ನಡುವೆ ಸಂಘ–ಸಂಸ್ಥೆಗಳಿಗೆ ಇದೇ ಜಾಗಗಳನ್ನು ಮಂಜೂರು ಮಾಡಲು ಹೊಸ ನೀತಿಯೊಂದನ್ನು ರೂಪಿಸಲು ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯೊಂದನ್ನು ಸರ್ಕಾರ ಜ.29ರಂದು ರಚಿಸಿದೆ. ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸಮಿತಿಯಲ್ಲಿದ್ದಾರೆ.

‘ಬಗರ್ ಹುಕುಂ ಸಾಗುವಳಿ ಮಾಡಲು ಆಸಕ್ತಿ ತೋರಿಸದೆ, ಸಂಘ–ಸಂಸ್ಥೆಗಳಿಗೆ ಇದೇ ಆಸ್ತಿ ಮಂಜೂರು ಮಾಡಲು ಹೊರಟಿರುವುದೇಕೆ’ ಎಂಬ ಪ್ರಶ್ನೆಯನ್ನು ಭೂಮಿ ಮತ್ತು ವಸತಿ ಹಕ್ಕು ಹೋರಾಟಗಾರರು ಎತ್ತಿದ್ದಾರೆ.

‘ಬೆಂಗಳೂರು ಸುತ್ತಮುತ್ತ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಉಳ್ಳವರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿಕೊಡುವ ಹುನ್ನಾರ ಇದರ ಹಿಂದೆ ಅಡಗಿದೆ’ ಎಂಬುದು ಅವರ ಆರೋಪ. ‘1993–94ರಿಂದ ಭೂಮಿಗಾಗಿ ಅರ್ಜಿ ಹಾಕಿ ಕಾಯುತ್ತಿರುವ ಭೂರಹಿತ ಲಕ್ಷಾಂತರ ಕುಟುಂಬಗಳಿವೆ. ಈಗ ಅದೇ ಭೂಮಿಯನ್ನೇ ಗುರಿಯಾಗಿಟ್ಟುಕೊಂಡು ಸರ್ಕಾರ ಹೊಸ ನೀತಿ ರೂಪಿಸಿ ಸಂಘ–ಸಂಸ್ಥೆಗಳಿಗೆ ಮಾರಾಟ ಮಾಡಲು ಹೊರಟಿದೆ. ಸರ್ಕಾರ ಈ ನಿರ್ಧಾರ ವಾಪ‍ಸ್ ಪಡೆಯಬೇಕು’ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಆಗ್ರಹಿಸಿದರು.

‘40 ವರ್ಷಗಳಿಂದ ಭೂಮಿ ಹಕ್ಕಿಗಾಗಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಕಾರಣವಿಲ್ಲದೆ ಸರ್ಕಾರ ತಿರಸ್ಕರಿಸುತ್ತಲೇ ಬಂದಿದೆ. ಇದೇ ಜಾಗವನ್ನು ಸಂಘ–ಸಂಸ್ಥೆಗಳ ಹೆಸರಿನಲ್ಲಿ ಉಳ್ಳವರಿಗೆ ಮಂಜೂರು ಮಾಡಲು ಈಗ ಹೊಸ ತಂತ್ರವನ್ನು ಸರ್ಕಾರ ಹೆಣೆದಿದೆ. ಸಂಘ–ಸಂಸ್ಥೆಗಳ ಬದಲಿಗೆ ಭೂ ರಹಿತರಿಗೆ ಮಂಜೂರು ಮಾಡುವುದರಲ್ಲಿ ತಪ್ಪದೇನಿದೆ? ರಿಯಲ್ ಎಸ್ಟೇಟ್ ಮಂತ್ರಿಗಳ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಮೊದಲು ಭೂಮಿ ಮಂಜೂರು ಮಾಡಬೇಕು’ ಎಂದು ಸಮಿತಿಯ ಕಾರ್ಯದರ್ಶಿ ಮಂಡಳಿಯ ಸಿರಿಮನೆ ನಾಗರಾಜ್ ಒತ್ತಾಯಿಸಿದರು.

‘ಸಮಿತಿ ರಚನೆಯ ಬಗ್ಗೆ ತಪ್ಪು ತಿಳಿವಳಿಕೆ’

‘ಸಮಿತಿ ರಚನೆಯ ಉದ್ದೇಶದ ಬಗ್ಗೆ ತಪ್ಪು ತಿಳಿವಳಿಕೆ ಉಂಟಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

‘ಇದುವರೆಗೆ ಗೋಮಾಳ ಸೇರಿದಂತೆ ಸರ್ಕಾರದ ಭೂಮಿಯನ್ನು ಯಾವುದೇ ನಿಯಮಗಳಲ್ಲಿದೆಯೇ ನೀಡಲಾಗುತ್ತಿತ್ತು. ಹೀಗಾಗಿ, ಈಗ ನಿಯಮಾವಳಿಗಳನ್ನು ರೂಪಿಸಲು ಉದ್ದೇಶಿಸಲಾಗಿದೆ. ಗೋಮಾಳ ಭೂಮಿಯನ್ನು ರೈತರಿಗೆ ಮಾತ್ರ ನೀಡಬೇಕು. ಸರ್ಕಾರದ ಇತರೆ ಭೂಮಿಯನ್ನು ಮಠಗಳಿಗೆ, ಶಿಕ್ಷಣ ಟ್ರಸ್ಟ್‌ಗಳಿಗೆ ಮತ್ತಿತರರಿಗೆ ನೀಡಬಹುದು’ ಎಂದು ತಿಳಿಸಿದ್ದಾರೆ.

‘ವಿಧಾನಸಭೆಗೆ ತರಲಿ’

ಸರ್ಕಾರದ ಆಸ್ತಿ ದುರುಪಯೋಗ ಹೆಚ್ಚುತ್ತಿದೆ. ಈಗ ಗೋಮಾಳ ಮತ್ತು ಹುಲ್ಲುಬನಿಗಳನ್ನು ಖಾಸಗಿ ಸಂಘ–ಸಂಸ್ಥೆಗಳಿಗೆ ಮಂಜೂರು ಮಾಡಲು ಹೊಸ ನೀತಿ ರೂಪಿಸಲು ಹೊರಟಿದೆ. ಈ ನೀತಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿ. ಸರ್ಕಾರ ರೈತರ ಪರವೋ ಅಥವಾ ಮತ್ತ್ಯಾರ ಪರ ಇದೆ ಎಂಬುದು ಗೊತ್ತಾಗಲಿದೆ

–ಎ.ಟಿ.ರಾಮಸ್ವಾಮಿ, ಶಾಸಕ

***

‘ನ್ಯಾಯಾಲಯದಲ್ಲಿ ಪ್ರಶ್ನೆ’

ಸಚಿವ ಸಂಪುಟ ಉಪಸಮಿತಿಗೆ ನೇಮಕ ಆಗಿರುವ ಅಧ್ಯಕ್ಷ ಮತ್ತು ಸದಸ್ಯರನ್ನು ನೋಡಿದರೆ ಕುರಿ ಕಾಯಲು ತೋಳಗಳನ್ನು ನೇಮಿಸಿದಂತೆ ಆಗಿದೆ. ಇವರ ಮೇಲೆಯೇ ಭೂ ಅಕ್ರಮದ ಆರೋಪಗಳಿವೆ. ಗೋಮಾಳ, ಸೊಪ್ಪಿನಬೆಟ್ಟದ ಜಾಗಗಳು ಸಮುದಾಯದ ಆಸ್ತಿ. ಅವುಗಳನ್ನು ಖಾಸಗಿ ಟ್ರಸ್ಟ್‌, ಸ್ವಯಂ ಸೇವಾ ಸಂಸ್ಥೆಗಳಿಗೆ ಕೊಡಲು ಮುಂದಾದರೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಕ್ಕೆ ಮಣೆ ಹಾಕಿದಂತೆ ಆಗಲಿದೆ. ಸಂಘ–ಸಂಸ್ಥೆಗಳಿಗೆ ಈ ಜಾಗ ಮಂಜೂರು ಮಾಡುವ ವಿಷಯದಲ್ಲಿನ ಕಾನೂನು ಬದ್ಧತೆಯನ್ನು ಪರಿಶೀಲಿಸಿ ನ್ಯಾಯಾಯಲಯದಲ್ಲಿ ಪ್ರಶ್ನಿಸಲಾಗುವುದು.

–ರವಿಕೃಷ್ಣ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.