ADVERTISEMENT

ಹಾವೇರಿ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೋವಿಡ್‌ ಸೋಂಕು

​ಪ್ರಜಾವಾಣಿ ವಾರ್ತೆ
Published 22 ಮೇ 2020, 13:40 IST
Last Updated 22 ಮೇ 2020, 13:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹಾವೇರಿ: ಜಿಲ್ಲೆಯಲ್ಲಿ ಹೊಸದಾಗಿ ಶುಕ್ರವಾರ ಮೂವರಿಗೆ ಕೋವಿಡ್–19 ಪತ್ತೆಯಾಗಿದೆ. ಇದರಿಂದ ಪ್ರಕರಣಗಳ ಸಂಖ್ಯೆ ಆರಕ್ಕೇರಿದೆ. ಈ ಪೈಕಿ ಒಬ್ಬ ಗುಣಮುಖನಾಗಿದ್ದಾನೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಸವಣೂರ ಎಸ್.ಎಂ.ಕೃಷ್ಣ ನಗರದ ನಿವಾಸಿ 55 ವರ್ಷದ ಮಹಿಳೆ (P-1689 ), ಮುಂಬೈನಿಂದ ಬಂದಿದ್ದ 27 ವರ್ಷದ ಯಲವಿಗಿ ಗ್ರಾಮದ ಯುವತಿ (P-1690) ಹಾಗೂ ಬಂಕಾಪುರ ನಿವಾಸಿ 22 ವರ್ಷದ ಚಾಲಕ (P-1691 ) ಇವರಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಆರು ಜನರ ಪೈಕಿ ಓರ್ವ ಬೆಂಗಳೂರಿಗೆ ತೆರಳಿದ್ದು, ಉಳಿದಂತೆ ಐವರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪೈಕಿ ಎಸ್.ಎಂ.ಕೃಷ್ಣ ನಗರದ P-672 ವ್ಯಕ್ತಿಯು ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದಾನೆ. ಆಸ್ಪತ್ರೆಯಲ್ಲಿದ್ದ ಈ ವ್ಯಕ್ತಿ ಶನಿವಾರ ಬಿಡುಗಡೆ ಹೊಂದಲಿದ್ದಾನೆ. ಆದಾಗ್ಯೂ ಈ ವ್ಯಕ್ತಿಯನ್ನು ಮುಂದಿನ 14 ದಿವಸ ಗೃಹ ಪ್ರತ್ಯೇಕತೆಯಲ್ಲಿರಿಸಿ, ವೈದ್ಯಕೀಯ ನಿಗಾವಹಿಸಲಾಗುವುದು. P-639 ವ್ಯಕ್ತಿಯ ಮೂರನೇ ಲ್ಯಾಬ್ ವರದಿ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

55 ವರ್ಷದ ಮಹಿಳೆಗೆ ಸೋಂಕು

ಇಂದು ಪತ್ತೆಯಾದ 55 ವರ್ಷದ ಮಹಿಳೆ (P-1689) ಸವಣೂರ ಪಟ್ಟಣದ ಕಂಟೋನ್ಮೆಂಟ್ ಪ್ರದೇಶದ ಎಸ್.ಎಂ.ಕೃಷ್ಣನಗರದ ನಿವಾಸಿಯಾಗಿದ್ದಾರೆ. P-639 ಮತ್ತು P-672 ಸೋಂಕಿತರ ಮನೆಯ ಸಮೀಪದ ನಿವಾಸಿಯಾಗಿರುತ್ತಾರೆ. ಸೋಂಕಿತ ಮಹಿಳೆಯು ತನ್ನ ಗಂಡ, ಮಗ, ಸೊಸೆ ಮತ್ತು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದರು. ಈ ಮಹಿಳೆಯೊಂದಿಗೆ ವಾಸವಿದ್ದ ಕುಟುಂಬದ ಇತರ ನಾಲ್ವರನ್ನು ಪ್ರಾಥಮಿಕ ಹಂತದ ಸಂಪರ್ಕಿತರು ಎಂದು ಪರಿಗಣಿಸಲಾಗಿದೆ. ಇತರ ಸಂಪರ್ಕಿತ ವ್ಯಕ್ತಿಗಳ ಪತ್ತೆಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

ನರ್ಸಿಂಗ್‌ ವಿದ್ಯಾರ್ಥಿನಿಗೂ ಸೋಂಕು

ಎರಡನೇ ಸೋಂಕಿತಳು (P-1690) 27 ವರ್ಷದ ಮಹಿಳೆಯಾಗಿದ್ದು, ಸವಣೂರ ತಾಲ್ಲೂಕು ಯಲವಗಿ ಗ್ರಾಮದ ನಿವಾಸಿಯಾಗಿದ್ದಾಳೆ. ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮುಗಿಸಿ ಎರಡು ತಿಂಗಳ ಹಿಂದೆ ಸಿ.ಎಚ್.ಓ ತರಬೇತಿಗಾಗಿ ಮುಂಬೈನಲ್ಲಿದ್ದ ಈ ಮಹಿಳೆ ಸೇವಾ ಸಿಂಧು ಪಾಸ್ ಪಡೆದು ಮೇ 18ರಂದು ಮುಂಬೈಯಿಂದ ಬಾಡಿಗೆ ಕಾರಿನ ಮೂಲಕ ಹಾವೇರಿಗೆ ಮೇ 19ರಂದು ಆಗಮಿಸಿದ್ದರು.

ಈಕೆಯನ್ನು ಸವಣೂರ ಮೊರಾರ್ಜಿ ದೇಸಾಯಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 19ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೇ 22ರಂದು ಸದರಿ ವ್ಯಕ್ತಿಯ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ತಂದೆಯನ್ನು ಪ್ರಾಥಮಿಕ ಹಂತದ ಸಂಪರ್ಕ ಎಂದು ಪರಿಗಣಿಸಲಾಗಿದೆ ಹಾಗೂ ಎರಡನೇ ಹಂತದ ಸಂಪರ್ಕದ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಸೋಂಕಿತರ ಮನೆ ಸುತ್ತ ‘ಸೀಲ್‌ಡೌನ್‌’

ಸವಣೂರ ಪಟ್ಟಣದ ಎಸ್.ಎಂ.ಕೃಷ್ಣನಗರವನ್ನು ಈಗಾಗಲೇ ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಯಲವಿಗಿ ಗ್ರಾಮ ಹಾಗೂ ಬಂಕಾಪುರ ಪಟ್ಟಣದ ಸೋಂಕಿತರ ಮನೆ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ‘ಸೀಲ್‍ಡೌನ್’ ಮಾಡಲಾಗಿದೆ ಹಾಗೂ 7 ಕಿ.ಮೀ. ವ್ಯಾಪ್ತಿಯಲ್ಲಿ ‘ಬಫರ್ ಜೋನ್’ ಎಂದು ಗುರುತಿಸಲಾಗಿದೆ.

ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕು ತಹಶೀಲ್ದಾರ್‌ ಅವರನ್ನು ಇನ್ಸಿಡೆಂಟ್‌ ಕಮಾಂಡರ್ ಎಂದು ನೇಮಿಸಲಾಗಿದೆ. ಸೀಲ್‍ಡೌನ್ ಪ್ರದೇಶಕ್ಕೆ ಒಳಹೋಗಲು ಹಾಗೂ ಹೊರ ಬರಲು ಒಂದೇ ಗೇಟ್‍ನ್ನು ನಿಗದಿಪಡಿಸಲಾಗಿದೆ. ಸೀಲ್‍ಡೌನ್ ಪ್ರದೇಶದ ಜನರಿಗೆ ಮನೆ–ಮನೆಗೆ ದಿನಬಳಕೆ ವಸ್ತುಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈ ನಂಟು: ಚಾಲಕನಿಗೆ ಸೋಂಕು

ಮೂರನೇ ಸೋಂಕಿತ 22 ವರ್ಷದ ವ್ಯಕ್ತಿ (P–1691) ಚಾಲಕನಾಗಿದ್ದು, ಬಂಕಾಪುರ ನಿವಾಸಿಯಾಗಿದ್ದಾನೆ. ಈತ ಬಂಕಾಪುರದಲ್ಲಿ ಬಾಡಿಗೆ ಕೊಠಡಿ ಪಡೆದು ವಾಸವಾಗಿದ್ದ. ಈತ ಸ್ವಯಂಪ್ರೇರಿತನಾಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಿದ್ದ. ಈತನ ಮಾದರಿ ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವ್ಯಕ್ತಿ ಬಂಕಾಪುರದಿಂದ ಮೆಣಸಿನಕಾಯಿ ಲೋಡನ್ನು ಮೇ 5, ಮೇ 8 ಹಾಗೂ ಮೇ 12 ರಂದು ಮೂರು ಬಾರಿ ಮುಂಬೈನ ‘ವಾಸಿ’ ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್‍ಗೆ ತೆಗೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ. ಉಳಿದಂತೆ ವಿವರವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಚಾಲಕ ಅನಾನಸ್ ಹಣ್ಣನ್ನು ಬೆಂಗಳೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದಾನೆ. ಗಂಟಲು ದ್ರವ ಪರೀಕ್ಷೆ ಮಾಡಿದ ಮೇಲೆ ಫಲಿತಾಂಶ ಬರುವವರೆಗೂ ಆತನನ್ನು ಕ್ವಾರಂಟೈನ್‌ ಮಾಡದೆ, ತಿರುಗಾಡಲು ಬಿಟ್ಟಿರುವುದು ಎಷ್ಟು ಸರಿ?. ಈಗ ಚಾಲಕನಿಗೆ ಕೋವಿಡ್‌–19 ದೃಢಪಟ್ಟಿರುವುದರಿಂದ ಬೆಂಗಳೂರಿಗೆ ಹೋಗಿರುವ ಈತನಿಂದ ಇನ್ನೆಷ್ಟು ಜನರಿಗೆ ಸೋಂಕು ಹರಡಿದೆ? ಎಂಬ ಆತಂಕ ಪ್ರಜ್ಞಾವಂತ ಜನರನ್ನು ಕಾಡುತ್ತಿದೆ.

ಹಾವೇರಿ ಜಿಲ್ಲೆ: ಕೊರೊನಾ ಅಂಕಿ ಅಂಶ

4546‌:ಇದುವರೆಗೆ ನಿಗಾದಲ್ಲಿರುವವರು

734:ಸಾಂಸ್ಥಿಕ ಕ್ವಾರಂಟೈನ್‌

9:ಐಸೊಲೇಷನ್‌ನಲ್ಲಿ ಇರುವವರು

4610:ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು

6:ಪಾಸಿಟಿವ್‌ ಬಂದ ವರದಿಗಳು

4247:ನೆಗೆಟಿವ್‌ ಬಂದ ವರದಿಗಳು

327:ಮಾದರಿಗಳ ವರದಿ ಬಾಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.