ADVERTISEMENT

ಬ್ರಿಟನ್ ವಲಸಿಗರು: ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 19:31 IST
Last Updated 2 ಜನವರಿ 2021, 19:31 IST
ಕೊರೊನಾ ವೈರಸ್‌(ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌(ಸಾಂದರ್ಭಿಕ ಚಿತ್ರ)   

ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಮತ್ತೊಬ್ಬರು ಕೋವಿಡ್ ಪೀಡಿತರಾಗಿದ್ದು, ಅಲ್ಲಿಂದ ಮರಳಿದವರಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ಬ್ರಿಟನ್‌ನಿಂದ ವಾಪಸ್ ಆದವರಲ್ಲಿ 67 ಮಂದಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆಯನ್ನು ಶನಿವಾರ ನಡೆಸಲಾಗಿದೆ. ಅದರಲ್ಲಿ 66 ಮಂದಿಯ ಪರೀಕ್ಷಾ ವರದಿ ಬಂದಿಲ್ಲ. ಅಲ್ಲಿಂದ ಬಂದವರಲ್ಲಿ ಈವರೆಗೆ ಒಟ್ಟು 2,173 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಲ್ಲಿ 2,056 ಮಂದಿಗೆ ಸೋಂಕು ತಗುಲಿಲ್ಲ ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇನ್ನೂ 83 ಮಂದಿಯ ವರದಿ ಬರಬೇಕಿದೆ.

ವಿವಿಧ ದೇಶಗಳಿಂದ ಬಂದ 1,768 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ವಿಮಾನ ನಿಲ್ದಾಣಗಳಲ್ಲಿ 2.71 ಲಕ್ಷ ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 755 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.21 ಲಕ್ಷ ದಾಟಿದೆ. ಸೋಂಕಿತರಲ್ಲಿ 3 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,099ಕ್ಕೆ ತಲುಪಿದೆ.

ADVERTISEMENT

ಒಂದೇ ದಿನ 1.09 ಲಕ್ಷ ಆರ್‌ಟಿ–ಪಿಸಿಆರ್ ಸೇರಿದಂತೆ 1.14 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 1.42 ಕೋಟಿ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೋವಿಡ್ ಪೀಡಿತರಲ್ಲಿ 976 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 8.98 ಲಕ್ಷಕ್ಕೆ ತಲುಪಿದೆ.

186 ಮಂದಿ ಐಸಿಯುನಲ್ಲಿ: ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಸೋಂಕಿತರಲ್ಲಿ ಸದ್ಯ 10,834 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 186 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 64 ಸಾವಿರ ನೇರ ಸಂಪರ್ಕಿತರು ಹಾಗೂ 73 ಸಾವಿರ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮತ್ತೆ 343 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.89 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 78 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 52,498ಕ್ಕೆ ತಲುಪಿದೆ. ದಕ್ಷಿಣ ಕನ್ನಡದಲ್ಲಿ 37, ಚಿಕ್ಕಬಳ್ಳಾಪುರದಲ್ಲಿ 29, ಉತ್ತರ ಕನ್ನಡದಲ್ಲಿ 28, ವಿಜಯಪುರದಲ್ಲಿ 25, ಬಳ್ಳಾರಿಯಲ್ಲಿ 22 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು, ಧಾರವಾಡ ಹಾಗೂ ತುಮಕೂರಿನಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.