ADVERTISEMENT

ಜಮಖಂಡಿ: ನಾಲ್ಕು ಜೀವ ತೆಗೆದ 21 ಗುಂಟೆ ಆಸ್ತಿ!

ರಾತ್ರಿ ನಡೆದ ಕಗ್ಗೊಲೆಗೆ ಬೆಚ್ಚಿಬಿದ್ದ ಮಧುರಖಂಡಿ ಗ್ರಾಮ

ಆರ್.ಎಸ್.ಹೊನಗೌಡ
Published 29 ಆಗಸ್ಟ್ 2021, 21:44 IST
Last Updated 29 ಆಗಸ್ಟ್ 2021, 21:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮಖಂಡಿ: ಕೇವಲ 21 ಗುಂಟೆ ಜಮೀನಿನ ವ್ಯಾಜ್ಯಕ್ಕೆ ನಾಲ್ಕು ಜೀವಗಳು ಬಲಿಯಾದ ತಾಲ್ಲೂಕಿನ ಮಧುರಖಂಡಿ ಗ್ರಾಮ ಅಕ್ಷರಶಃ ತತ್ತರಿಸಿದೆ.

ಮಳೆಯ ನೀರಿನೊಂದಿಗೆ ಶನಿವಾರ ರಾತ್ರಿ ಹರಿದ ರಕ್ತದ ಓಕುಳಿ ಇಡೀ ಗ್ರಾಮವನ್ನು ಆತಂಕದ ಛಾಯೆಗೆ ದೂಡಿದೆ. ಊರಿನಲ್ಲಿ ನೀರವ ಮೌನ ಆವರಿಸಿದೆ.

ಪಕ್ಕದ ಜಮೀನಿನ ಪುಟಾಣಿ ಮನೆತನದವರೊಂದಿಗೆ ಮಧುರಖಂಡಿಯ ಮುದರಡ್ಡಿ ಕುಟುಂಬದವರು ಹೊಂದಿದ್ದ ಆಸ್ತಿಯ ವ್ಯಾಜ್ಯ ಸಹೋದರರಾದ ಹಣಮಂತ ಮುದರಡ್ಡಿ (45), ಬಸವರಾಜ (37), ಈಶ್ವರ (35), ಮಲ್ಲಿಕಾರ್ಜುನ (33) ಅವರ ಕಗ್ಗೊಲೆಗೆ ಕಾರಣವಾಗಿತ್ತು. ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ADVERTISEMENT

ನ್ಯಾಯಾಲಯದಲ್ಲಿ ಪ್ರಕರಣ: ಕುಲಹಳ್ಳಿ ಗ್ರಾಮದ ಬಳಿಯ 21 ಗುಂಟೆ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿ
ಸಿದಂತೆ ಎರಡೂ ಕುಟುಂಬಗಳ ಮಧ್ಯೆ ಮುಂಚಿನಿಂದಲೂ ಕಲಹವಿತ್ತು. 2014ರಲ್ಲಿ ರಾಜಿ ಪಂಚಾಯಿತಿ ನಡೆಸಿ ಗ್ರಾಮದ ಹಿರಿಯರು ಸಂಧಾನ ಮಾಡಿಸಿದ್ದರು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಪುಟಾಣಿ ಮನೆತನದ ಸತ್ಯಪ್ಪ ಪುಟ್ಟಾಣಿ ಇವರಿಗೆ ಮೂರು ಮಕ್ಕಳು ಮಹಾದೇವ, ಪರಸಪ್ಪ, ನಾಗಪ್ಪ. ಅವರಿಗೆ ಮೂಲ ಆಸ್ತಿ ಏಳು ಎಕರೆ ಅದನ್ನು 3 ಎಕರೆ 20 ಗುಂಟೆಯಂತೆ ಎರಡು ಭಾಗವಾಗಿ ಮಾಡಿ, ಒಂದು ಭಾಗವನ್ನು ಮುದರಡ್ಡಿ ಮನೆತನದವರಿಗೆ ಮಾರಾಟ ಮಾಡಿದ್ದರು.

ಆದರೆ ಮಹಾದೇವನ ಮೊದಲ ಹೆಂಡತಿ ಹಾಗೂ ಮಕ್ಕಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಪಂಚಾಯ್ತಿ ಮಾಡಿದಾಗ ಅವರ ಪಾಲಿಗೆ 21 ಗುಂಟೆ ಜಮೀನು ಬಂದಿತ್ತು. ಆದರೆ ಮುದರಡ್ಡಿ ಕುಟುಂಬದವರು ಬಿಡದಿದ್ದಾಗ ಜಗಳವಾಗುತ್ತದೆ. ಈ ವೇಳೆ ನಡೆದ ಘರ್ಷಣೆಯಲ್ಲಿ ನಾಲ್ವರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ಮೇಲೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.