ADVERTISEMENT

ದತ್ತಾಂಶದ ಮಾಯಾಲೋಕಕ್ಕೆ ಕಾರಣವಾಗಲಿದೆ 5ಜಿ, ಎಡ್ಜ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 19:49 IST
Last Updated 17 ನವೆಂಬರ್ 2021, 19:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ವಸ್ತುಗಳ ಅಂತರಜಾಲ (ಐಒಟಿ), ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಯಂತ್ರದ ಕಲಿಕೆ (ಮೆಶಿನ್ ಲರ್ನಿಂಗ್), ಧ್ವನಿ, ವಿಡಿಯೊ, ಅಪ್ಲಿಕೇಶನ್ ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಬೆಸೆಯುವ 5ಜಿ ನೆಟ್‌ವರ್ಕ್ ತಂತ್ರಜ್ಞಾನವು, ಸದ್ಯೋಭವಿಷ್ಯದಲ್ಲಿ ಮಾನವನು ದತ್ತಾಂಶದ ಮೇಲೆ ಸಂಪೂರ್ಣವಾಗಿ ಅವಲಂಬಿಸುವಂತೆ ಮಾಡಲಿದೆ.

ಬೆಂಗಳೂರು ತಂತ್ರಜ್ಞಾನ ಶೃಂಗ 2021ರಲ್ಲಿ ಬುಧವಾರ "ಗೇಯ್ನಿಂಗ್ ಆನ್ ಎಡ್ಜ್ ವಿದ್ 5ಜಿ"ಸಂವಾದಗೋಷ್ಠಿಯಲ್ಲಿ ಭಾಗವಹಿಸಿದವರ ಒಟ್ಟಾರೆ ಮಾತಿನ ಸಾರವಿದು. ಕಿಂಡ್ರಿಲ್‌ ಸಂಸ್ಥೆಯ ತಂತ್ರಜ್ಞ ಬೆಂಜಮಿನ್ ಬ್ರಿಲಾಟ್ ಅವರು ವಿದ್ವತ್ ಗೋಷ್ಠಿಗೆ ಚಾಲನೆ ನೀಡಿ, "5ಜಿ ತಂತ್ರಜ್ಞಾನವು ಭಾರಿ ಸಂಖ್ಯೆಯ ಯಾಂತ್ರಿಕ ಸಾಧನಗಳನ್ನು ಬೆಸೆದು, ವಿಳಂಬವಿಲ್ಲದೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಸೆನ್ಸರ್‌ಗಳನ್ನು, ಆಗ್ಮೆಂಟೆಡ್ ರಿಯಾಲಿಟಿ, ಐಓಟಿಯಂತಹ ತಂತ್ರಜ್ಞಾನಗಳನ್ನು ಇನ್ನಷ್ಟು ವ್ಯಾಪಕವಾಗಿ ಬಳಸುವ ಭವಿಷ್ಯದ ಕಾರ್ಖಾನೆಗಳು 5ಜಿ ಕಾರ್ಖಾನೆಗಳಾಗಲಿವೆ" ಎಂದರು.

ಏರ್‌ಟೆಲ್ ಬಿಸಿನೆಸ್‌ನ ಮುಖ್ಯಸ್ಥ ಅಲೋಕ್ ಶುಕ್ಲ, ಟೆಲ್‌ಸ್ಟ್ರಾದ ನೆಟ್‌ವರ್ಕ್ ಮತ್ತು ಪ್ರೊಡಕ್ಟ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸುನಿಲ್ ಮೆನನ್, ವಿಸ್ತಾರ-ಟಾಟಾ ಏರ್‌ಲೈನ್ಸ್ ಮುಖ್ಯ ಮಾಹಿತಿ ಅಧಿಕಾರಿ (ಸಿಐಒ) ವಿನೋದ್ ಭಟ್, ವಿರೆಸೆಂಟ್ ಇನ್ಫ್ರಾಸ್ಟ್ರಕ್ಚರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಕುಶಲ್ ವರ್ಷ್ನೆ ಭಾಗವಹಿಸಿದ ಈ ಸಂವಾದಗೋಷ್ಠಿಯನ್ನು ಕಿಂಡ್ರಿಲ್ ಇಂಡಿಯಾ ಸಂಸ್ಥೆಯ ಭಾರತೀಯ ಪಾಲುದಾರ ಸಂಜಯ್ ಸಾಹಿನಿ ನಡೆಸಿಕೊಟ್ಟರು.

ADVERTISEMENT

5ಜಿ ತಂತ್ರಜ್ಞಾನವು ಇಂಟರ್ನೆಟ್ ಮೂಲಕ ದತ್ತಾಂಶ ವಿನಿಮಯದ ವೇಗವನ್ನು ಹೆಚ್ಚಿಸಲಿದೆ. ಸ್ಮಾರ್ಟ್ ಸಾಧನಗಳ ಸಂಖ್ಯೆ ಹೆಚ್ಚಾಗಲಿದ್ದು, ಸ್ವಯಂಚಾಲಿತ ವ್ಯವಸ್ಥೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂಬ ಮಾತು ಸಂವಾದದಲ್ಲಿ ಮಾರ್ದನಿಸಿತು. ಜೊತೆಗೆ, ದತ್ತಾಂಶ ಸುರಕ್ಷತೆಯ ಬಗ್ಗೆ ಆತಂಕವೂ ವ್ಯಕ್ತವಾಯಿತು. 5ಜಿಯು ಕೈಗಾರಿಕೆಯ ಲಿಟ್ಮಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಿದೆ. ದತ್ತಾಂಶ ಗೋಪ್ಯತೆ, ಸೈಬರ್ಭದ್ರತೆಯ ಬೆದರಿಕೆಗಳನ್ನು ಎದುರಿಸಲು ಯಾವ ನೀತಿಗಳನ್ನು ರೂಪಿಸಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ ಎಂದರು ಸುನಿಲ್ ಮೆನನ್.

ಗೇಮಿಂಗ್ ಉದ್ಯಮಕ್ಕೆ ವೇಗ ದೊರೆಯಲಿದ್ದು, ಬ್ಲಾಕ್‌ಚೈನ್, ಕ್ರಿಪ್ಟೋಕರೆನ್ಸಿ, ಕ್ರಿಪ್ಟೋಮೈನಿಂಗ್ ಮುಂತಾದವುಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ತಂತ್ರಜ್ಞಾನ ಕಾರ್ಯಗಳೆಲ್ಲವೂ ಕ್ಲೌಡ್ ಅನ್ನು ಅವಲಂಬಿಸುವ ಮೂಲಕ 5ಜಿ ತಂತ್ರಜ್ಞಾನವು 5ನೇ ಕೈಗಾರಿಕಾ ಕ್ರಾಂತಿಗೆ ಮುನ್ನುಡಿಯಾಗಲಿದೆ ಎಂದರು ಕುಶಲ್ ವರ್ಷ್ನೆ.

ಭಾರತದ ಅರ್ಥವ್ಯವಸ್ಥೆಯಲ್ಲಿ ಈಗಾಗಲೇ ಗಮನಾರ್ಹ ಪಾತ್ರ ವಹಿಸುತ್ತಿರುವ ದೂರಸಂಪರ್ಕ ಕ್ಷೇತ್ರವು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. 5ಜಿ ಸೇವೆಗಳು ಈ ಪೈಕಿ ಹಲವು ಬದಲಾವಣೆಗಳಿಗೆ ಕಾರಣವಾಗಲಿವೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ವಿಮಾನವೇರುವ ಮುನ್ನ ಸ್ಪರ್ಶವಿಲ್ಲದೆಯೇ ತಪಾಸಣೆ

5ಜಿ ಎಂಬುದು ಇಂಟರ್ನೆಟ್ ವೇಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಒಂದು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಲಕ್ಷಾಂತರ ಸಾಧನಗಳನ್ನು ಪರಸ್ಪರ ಬೆಸೆಯಲು ಸಾಧ್ಯವಾಗಿಸುತ್ತದೆ. ಎಡ್ಜ್ ಹಾಗೂ 5ಜಿ ತಂತ್ರಜ್ಞಾನಗಳು ಮಿಳಿತಗೊಂಡರೆ ಅದೆಷ್ಟೋ ಕೆಲಸಕಾರ್ಯಗಳು ಸ್ವಯಂಚಾಲಿತವಾಗಿ ನಡೆಯಬಲ್ಲವು.

ಹೇಗೆ? ಉದಾಹರಣೆಗೆ, ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆಗೆ ಈಗಿನಂತೆ ಕೌಂಟರ್‌ಗಳ ಸರತಿ ಸಾಲಿನಲ್ಲಿ ಕಾದು ನಿಲ್ಲಬೇಕಿಲ್ಲ. ಸುಮ್ಮನೇ ನಡೆದು ಹೋದರಾಯಿತು. ಕ್ಲೌಡ್ ಮೂಲಕ ಬೆಸೆದುಕೊಂಡಿರುವ,ವಿಭಿನ್ನ ಸಾಧನಗಳ ಸೆನ್ಸರ್‌ಗಳು ಎಲ್ಲ ರೀತಿಯ ತಪಾಸಣೆಯನ್ನೂ ಮಾಡಿ ಮುಗಿಸುತ್ತವೆ. ಪ್ರಯಾಣಿಕರು ಯಾವುದನ್ನೂ ಸ್ಪರ್ಶಿಸಬೇಕಿಲ್ಲ. ಮಿಲಿಸೆಕೆಂಡುಗಳ ಅಂತರದಲ್ಲಿ ತಪಾಸಣೆ ನಡೆದು, ಪ್ರಯಾಣಿಕನ ಪಿಎನ್ಆರ್ ನಂಬರ್‌ಗೆ ಸಂಬಂಧಿಸಿದ ಎಲ್ಲ ದತ್ತಾಂಶವೂ ಕೆಲವೇ ಕ್ಷಣಗಳೊಳಗೆ ಸಂಬಂಧಪಟ್ಟವರಿಗೆ ರವಾನೆಯಾಗುತ್ತದೆ.

ಅನುಮಾನಾಸ್ಪದವೇನಾದರೂ ಇದ್ದರೆ ಪತ್ತೆ ಮಾಡುವ ಕಾರ್ಯ ಕ್ಷಿಪ್ರವಾಗಿ ನಡೆದುಬಿಡುತ್ತದೆ ಮತ್ತು ಸಂಬಂಧಪಟ್ಟವರಿಗೆ ತಕ್ಷಣ ಸಂದೇಶ ಹೋಗುತ್ತದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.