ADVERTISEMENT

ಕೃಷಿ ಪಂಪ್‌ಸೆಟ್‌ಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್‌: ಇಂಧನ ಸಚಿವ ಸುನಿಲ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 5:30 IST
Last Updated 25 ಫೆಬ್ರುವರಿ 2022, 5:30 IST
ಸುನಿಲ್‌ ಕುಮಾರ್
ಸುನಿಲ್‌ ಕುಮಾರ್   

ಬೆಂಗಳೂರು: ಬೇಸಿಗೆಯಲ್ಲಿ ಕೃಷಿ ಪಂಪ್‌ಸೆಟ್‌ ಫೀಡರ್‌ಗಳಿಗೆ ಹಗಲಿನ ವೇಳೆ ನಿರಂತರ ಏಳು ಗಂಟೆಗಳ ಕಾಲ ಮೂರು ಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್‌ ತಿಳಿಸಿದ್ದಾರೆ.

ಬೇಸಿಗೆಯ ಮೂರು ತಿಂಗಳು ಕೃಷಿ ಪಂಪ್‌ಸೆಟ್‌, ಗೃಹ ಬಳಕೆ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಕೆ ಸಂಬಂಧ ಗುರುವಾರ ನಡೆದ ಎಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಮಾತನಾಡಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಮತ್ತು ಗೃಹ ಬಳಕೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾದರೆ ವಲಯ ಮುಖ್ಯ ಎಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದರು.

ADVERTISEMENT

ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಆಗುವ ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆಯಿಂದ ಆಗುವ ವಿದ್ಯುತ್‌ ಪೂರೈಕೆ ಸಮಸ್ಯೆ ಬಗ್ಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಯೊಳಗಾಗಿ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೆ ವಿದ್ಯುತ್‌ ವ್ಯತ್ಯಯದಿಂದ ಆಗುವ ತೊಂದರೆಯನ್ನು ಕರ್ತವ್ಯ ಲೋಪ ಎಂದೇ ಪರಿಗಣಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಸಾಮಾನ್ಯ ದಿನಗಳ ವಿದ್ಯುತ್‌ ಬಳಕೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ಯಾವುದೇ ಕೊರತೆ ಇಲ್ಲ. ಆದರೆ, ಸರಬರಾಜು ವೇಳೆ ವ್ಯತ್ಯಾಸವಾಗುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆಯೂ ಸೂಚಿಸಲಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರದ ನಿಯಮಾವಳಿ ಪ್ರಕಾರ ದಿನವೂ 7 ಗಂಟೆ 3ಫೇಸ್‌ ವಿದ್ಯುತ್‌ ನೀಡುತ್ತಿಲ್ಲ ಎಂದು ರಾಜ್ಯದ ಅನೇಕ ಭಾಗಗಳಿಂದ ಜನಪ್ರತಿನಿಧಿಗಳು, ರೈತ ಮುಖಂಡರು ದೂರು ನೀಡಿದ್ದಾರೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ಸಮಸ್ಯೆ ಪರಿಹಾರಕ್ಕೆ ಉತ್ತರದಾಯಿತ್ವ ನಿಗದಿ ಮಾಡಲಾಗುವುದು ಎಂದರು.

ಕೃತಕ ಕೈ ಅಳವಡಿಕೆಗೆ ಪರಿಹಾರ: ವಿದ್ಯುತ್‌ ಅವಘಡದಿಂದ ಎರಡೂ ಕೈಕಳೆದುಕೊಂಡಿದ್ದಕಲಬುರಗಿ ಜಿಲ್ಲೆ ಬಸವನಬಾಗೇವಾಡಿಯ ಕೆ.ಎನ್‌.ಸದಾಶಿವ ಅವರಿಗೆ ಕೃತಕ ಕೈ ಅಳವಡಿಸುವುದಕ್ಕಾಗಿ ₹2,56,236 ಪರಿಹಾರ ಧನ ಬಿಡುಗಡೆ ಮಾಡುವಂತೆ ಸಚಿವರು ಸಭೆಯಲ್ಲಿ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.