ಬೆಂಗಳೂರು: ರಾಜ್ಯದ ಹಲವು ನಗರ ಮತ್ತು ಪಟ್ಟಣಗಳು ಐದನೇ ತಲೆಮಾರಿನ (5ಜಿ) ಇಂಟರ್‌ನೆಟ್ ಸೇವೆ ಪಡೆಯುತ್ತಿದ್ದರೆ, ರಾಜ್ಯದ 927 ಕಂದಾಯ ಗ್ರಾಮಗಳಲ್ಲಿ 4ನೇ ತಲೆಮಾರಿನ (4ಜಿ) ಇಂಟರ್‌ನೆಟ್ ಸೇವೆಯೂ ಲಭ್ಯವಿಲ್ಲ. ಭಾರತ್‌ನೆಟ್ ಯೋಜನೆ ಅಡಿ ‘ಸಾರ್ವಜನಿಕ ವೈಫೈ’ ಸಂಪರ್ಕವೂ ತಲುಪಿಲ್ಲ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವಾಲಯವು ಈಚೆಗೆ ರಾಜ್ಯಸಭೆಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.
ಸರ್ಕಾರದ ಸೇವೆಗಳು, ವಿವಿಧ ಸವಲತ್ತುಗಳು, ವಿದ್ಯಾರ್ಥಿಗಳ ಪಠ್ಯ ಪೂರಕ ಚಟುವಟಿಕೆಗಳು ಸಂಪೂರ್ಣ ಡಿಜಿಟಲೀಕರಣವಾಗಿರುವ ಈ ಹೊತ್ತಿನಲ್ಲಿ, 4ಜಿ ನೆಟ್‌ವರ್ಕ್ ಇಲ್ಲದ ಗ್ರಾಮ ಮತ್ತು ಕಾಲೊನಿಗಳ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿವಿಧ ಅರ್ಜಿಗಳ ಸಲ್ಲಿಕೆ, ಅರ್ಜಿಗಳ ಡೌನ್‌ಲೋಡ್, ದೈನಂದಿನ ವ್ಯವಹಾರದಲ್ಲಿ ಯುಪಿಐ ಬಳಕೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ದತ್ತಾಂಶಗಳನ್ನು ಸಂಬಂಧಿತ ಪೋರ್ಟಲ್‌ಗಳಿಗೆ ಅಳವಡಿಸುವಲ್ಲಿ ತೊಡಕಾಗುತ್ತಿದೆ.
ಡಿಜಿಟಲ್ ಭಾರತದ ಭಾಗವಾಗಿ, ‘ಡಿಜಿಟಲ್ ಭಾರತ ನಿಧಿ’ ಯೋಜನೆ ಅಡಿಯಲ್ಲಿ ದೇಶದ ಎಲ್ಲ ಗ್ರಾಮಗಳಿಗೂ ಕನಿಷ್ಠ 4ಜಿ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವ ಗುರಿಯನ್ನು ಸಚಿವಾಲಯ ಹಾಕಿಕೊಂಡಿತ್ತು. ರಾಜ್ಯದ ಎಲ್ಲ ಗ್ರಾಮಗಳಿಗೆ 4ಜಿ ಸಂಪರ್ಕ ಕಲ್ಪಿಸುವ ಸಂಬಂಧ ಸಚಿವಾಲಯವು 2017ರಲ್ಲಿ ಯೋಜನೆ ರೂಪಿಸಿತ್ತು. ಈ ಯೋಜನೆಯ ಅವಧಿ 2023–24ರ ಅಂತ್ಯಕ್ಕೇ ಪೂರ್ಣಗೊಂಡಿದೆ. ಆದರೆ ಎಲ್ಲ ಗ್ರಾಮಗಳಿಗೆ 4ಜಿ ಸಂಪರ್ಕ ದೊರೆತಿಲ್ಲ.
927 ಗ್ರಾಮಗಳಿಗೆ 4ಜಿ ಸಂಪರ್ಕ ಇಲ್ಲ ಎಂಬ ಮಾಹಿತಿಯನ್ನು ಸಚಿವಾಲಯ ನೀಡಿದೆಯೇ ಹೊರತು, ಯಾವ ಗ್ರಾಮಗಳು ಎಂಬುದನ್ನು ಹೆಸರಿಸಿಲ್ಲ.
ಬೆಂಗಳೂರು ನಗರ ಕೇಂದ್ರದಿಂದ 40–45 ಕಿ.ಮೀ. ದೂರದಲ್ಲಿರುವ ಕೆಲವು ಗ್ರಾಮಗಳಲ್ಲೂ 4ಜಿ ಸಂಪರ್ಕ ಇಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ವ್ಯಾಪ್ತಿಯಲ್ಲಿ, ರಾಮನಗರ ಜಿಲ್ಲೆಯ ಮಾಗಡಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳು ಇಂತಹ ಆಧುನಿಕ ಸವಲತ್ತುಗಳಿಂದ ವಂಚಿತವಾಗಿವೆ. ಇವು ಕೆಲವು ಉದಾಹರಣೆಯಷ್ಟೆ. 927 ಕಂದಾಯ ಗ್ರಾಮಗಳು ಮಾತ್ರವಲ್ಲದೆ, ಅವುಗಳ ವ್ಯಾಪ್ತಿಯಲ್ಲಿ ಇರುವ ಕಾಲೊನಿಗಳೂ 4ಜಿ ಸಂಪರ್ಕದಿಂದ ವಂಚಿತವಾಗಿವೆ.
ಬಹುತೇಕ ಸಂದರ್ಭದಲ್ಲಿ ಯುಪಿಐ ಮೂಲಕ ಹಣ ಕಳುಹಿಸಲು ಸಾಧ್ಯವಾಗುವುದೇ ಇಲ್ಲ. ಹೆದ್ದಾರಿ ಅಥವಾ ಪಕ್ಕದ ಹಳ್ಳಿಯತ್ತ ಹೋಗಿ ಯುಪಿಐ ಬಳಸಬೇಕಾಗಿದೆಹರಿಪ್ರಸಾದ್ ಆರ್.ವಿ. ನಾಗೇನಹಳ್ಳಿ, ದೊಡ್ಡಬಳ್ಳಾಪುರ, ಬೆಂ.ಗ್ರಾ
ನಮ್ಮ ಕಾಲೊನಿಯಲ್ಲಿ 4ಜಿ ನೆಟ್‌ವರ್ಕ್ ಇಲ್ಲ. ಸ್ಮಾರ್ಟ್‌ಪೋನ್, ಲ್ಯಾಪ್‌ಟಾಪ್ ಇದ್ದರೂ ಪಕ್ಕದ ಹಳ್ಳಿಗೆ ಹೋಗಿ ಸರ್ಕಾರಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆಭವ್ಯ ಎಂ.ಜಿ. ಉಪ್ಪನಾಯಕನಹಳ್ಳಿ, ಚಿತ್ರದುರ್ಗ
29,818
ರಾಜ್ಯದಲ್ಲಿನ ಗ್ರಾಮಗಳ ಸಂಖ್ಯೆ
28,891
4ಜಿ ಸಂಪರ್ಕ ಇರುವ ಗ್ರಾಮಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.