ADVERTISEMENT

ರಾಜ್ಯದಲ್ಲಿ ಹೋಬಳಿಗೊಂದು ‘ಗಾಂಧಿ ಶಾಲೆ’: 2025–26ನೇ ಸಾಲಿನ ಬಜೆಟ್‌ನಲ್ಲೇ ಘೋಷಣೆ

ಚಂದ್ರಹಾಸ ಹಿರೇಮಳಲಿ
Published 25 ಡಿಸೆಂಬರ್ 2024, 23:10 IST
Last Updated 25 ಡಿಸೆಂಬರ್ 2024, 23:10 IST
<div class="paragraphs"><p>ಸರ್ಕಾರಿ ಶಾಲೆ (ಪ್ರಾತಿನಿಧಿಕ ಚಿತ್ರ)</p></div>

ಸರ್ಕಾರಿ ಶಾಲೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಸರಿಸಲಾಗಿದ್ದ ‘ವಿವೇಕ’ ಶಾಲೆಗಳಿಗೆ ಪರ್ಯಾಯವಾಗಿ ಪ್ರತಿ ಹೋಬಳಿ ಕೇಂದ್ರದಲ್ಲೂ ‘ಗಾಂಧಿ ವಸತಿ ಶಾಲೆ’ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಳಗಾವಿಯಲ್ಲಿ 1924ರಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವದ ನೆನಪಿಗಾಗಿ ಈಗಾಗಲೇ ‘ಗಾಂಧಿ ಭಾರತ’ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಿದ್ದು, ಅದರ ಮುಂದುವರಿದ ಭಾಗವಾಗಿ ಗಾಂಧಿ ವಸತಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಈ ಯೋಜನೆಯನ್ನು ಬೆಳಗಾವಿ ಕಾರ್ಯಕ್ರಮದ ಬದಲು, 2025–26ನೇ ಸಾಲಿನ ಬಜೆಟ್‌ನಲ್ಲೇ ಘೋಷಣೆ ಮಾಡಲು ಈಚೆಗೆ ನಡೆದ ಸಂಪುಟ ಸಭೆಯೂ ಸಮ್ಮತಿಸಿದೆ.

ADVERTISEMENT

‘ಪ್ರತಿ ಹೋಬಳಿ ಅಥವಾ ತಾಲ್ಲೂಕಿಗೆ ಒಂದರಂತೆ ಗಾಂಧಿ ಶಾಲೆ ತೆರೆಯಲು ಚರ್ಚೆ ನಡೆದಿದೆ. ಸಚಿವರಲ್ಲಿ ಹೆಚ್ಚಿನವರು ಹೋಬಳಿಗೆ ಒಂದರಂತೆ ತೆರೆಯಲು ಒಲವು ತೋರಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ನಂತರ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಬಜೆಟ್‌ನಲ್ಲೇ ಘೊಷಣೆ ಮಾಡಲಾಗುವುದು’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ವಿವೇಕ’ ಹೆಸರಿನಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕೊಠಡಿ ನಿರ್ಮಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮ ರಾಜಕೀಯ ವಿವಾದದ ಸ್ವರೂಪ ‍ಪಡೆದುಕೊಂಡಿತ್ತು. ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌, ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿತ್ತು.

‘ಗಾಂಧಿ ವಸತಿ ಶಾಲೆಗಳು ಬಿಜೆಪಿ ಸರ್ಕಾರದ ವಿವೇಕ ಹೆಸರಿಗೆ ಪರ್ಯಾಯವಲ್ಲ; ಗಾಂಧಿ ತತ್ವಗಳಾದ ಸತ್ಯ, ಅಹಿಂಸೆ, ಸಹಬಾಳ್ವೆ, ಸನ್ಮಾರ್ಗದ ಆಲೋಚನೆಗಳನ್ನು ಹಾಗೂ ಸಮಾಜಿಕ ಸಹಿಷ್ಣುತೆಯ ಮಹತ್ವವನ್ನು ಮಕ್ಕಳಲ್ಲಿ ರೂಢಿಸುವ ಕಾರ್ಯಕ್ರಮದ ಭಾಗವಾಗಿ ಇಂತಹ ಶಾಲೆಗಳನ್ನು ತೆರೆಯಲಾಗುತ್ತಿದೆ’ ಎಂದು ಪಾಟೀಲ ಸ್ಪಷ್ಟಪಡಿಸಿದರು. 

‘ಗಾಂಧಿ ಶಾಲೆಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅನುಗುಣವಾಗಿರುತ್ತವೆ. ಬಾಲಕ ಮತ್ತು ಬಾಲಕಿಯರನ್ನು ಒಳಗೊಂಡ ಸಹ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತದೆ. ಬೋಧನಾ ಮಾಧ್ಯಮ ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಬೇಡಿಕೆ ಪರಿಗಣಿಸಿ, ಶಾಲಾ ಶಿಕ್ಷಣ ಇಲಾಖೆ ಜತೆ ಸಮಾಲೋಚಿಸಿದ ನಂತರ ಅಂತಿಮರೂಪ ನೀಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  

ಗಾಂಧಿ ಶಾಲೆಗಳ ಪರಿಕಲ್ಪನೆಗಳನ್ನು ಸಾಕಾರಗೊಳಿಸಲು, ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳಲ್ಲೂ ‘ನಾವು ಮನುಜರು’ ಕಾರ್ಯಕ್ರಮ ಜಾರಿಗೊಳಿಸಿದೆ. ಶಾಲಾ ಪಠ್ಯಪುಸ್ತಕಗಳಲ್ಲಿ ಮಹಾತ್ಮ ಗಾಂಧಿಯವರು ಪಟ್ಟಿ ಮಾಡಿರುವ ಸಂವಿಧಾನದ ಮುನ್ನುಡಿ ಮತ್ತು ಸಪ್ತ ಸಾಮಾಜಿಕ ಪಾತಕಗಳನ್ನು ಮುದ್ರಿಸಿ, ಮಕ್ಕಳಿಗೆ ವಿತರಿಸಬೇಕು. ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಸಪ್ತ ಸಾಮಾಜಿಕ ಪಾತಕಗಳನ್ನು ಸಾಮೂಹಿಕವಾಗಿ ವಾಚನ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಇರುವ ವಸತಿ ಶಾಲೆಗಳು

  • ಆದರ್ಶ 

  • ಏಕಲವ್ಯ

  • ಮೊರಾರ್ಜಿ ದೇಸಾಯಿ

  • ಮೌಲಾನ ಆಜಾದ್‌

  • ಕಿತ್ತೂರು ರಾಣಿ ಚೆನ್ನಮ್ಮ  

ಧ್ಯಾನಸ್ಥ ಸ್ಥಿತಿಯ ಭಾವಚಿತ್ರ ಕಡ್ಡಾಯ

ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ, ಕಾಲೇಜುಗಳಲ್ಲೂ ಗಾಂಧೀಜಿ ಅವರ ಧ್ಯಾನಸ್ಥ ಸ್ಥಿತಿಯಲ್ಲಿರುವ ಭಾವಚಿತ್ರ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.  ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ ನಿಗಮ ಮಂಡಳಿಗಳ ಎಲ್ಲ ಕಚೇರಿಗಳಲ್ಲೂ ಧ್ಯಾನಸ್ಥ ಸ್ಥಿತಿಯ ಭಾವಚಿತ್ರ ಹಾಕಲು ಹಾಗೂ ಸಪ್ತ ಸಾಮಾಜಿಕ ಪಾತಕಗಳನ್ನು ಫಲಕದಲ್ಲಿ ಅಳವಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.