ADVERTISEMENT

ನಾಯಿ, ನರಿ ಅಂದುಕೊಂಡೇ ಇರಿ: ಬಿಜೆಪಿ, ಕಾಂಗ್ರೆಸ್‌ಗೆ ಎಎಪಿ ಚಾಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2023, 4:49 IST
Last Updated 8 ಜನವರಿ 2023, 4:49 IST
   

ಬೆಂಗಳೂರು: ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಒಬ್ಬ ರಾಜಕಾರಣಿಯಾದರೂ ಪ್ರೌಢತೆಯಿಂದ ನಡೆಯುತ್ತಿರುವಿರೆ? ಎಂದು ಆಮ್‌ ಆದ್ಮಿ ಪಕ್ಷ (ಎಎಪಿ)ದ ರಾಜ್ಯ ಘಟಕ ಪ್ರಶ್ನೆ ಮಾಡಿದೆ.

ಎಎಪಿ ಪ್ರಶ್ನೆ ಏಕೆ?

‘ಕಾಂಗ್ರೆಸ್ಸಿನವರ ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಾಯಿ ಮರಿ ತರಹ ವರ್ತಿಸುತ್ತಾರೆ. ಗಡಗಡ ಎಂದು ನಡುಗುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.

ADVERTISEMENT

ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ‘ನಾನು ರಾಜ್ಯದ ಜನರ ಸೇವೆ ಮಾಡುವ ನಿಯತ್ತಿನ ನಾಯಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನನಗೆ ಅಧಿಕಾರ ಸಿಕ್ಕಿದೆ, ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ಜನರನ್ನು ತಿನ್ನುವ ತೋಳ ಆಗಲಾರೆ. ಕೆಲವು ನಾಯಿ ವೇಷದ ತೋಳಗಳಿವೆ. ನಾಯಿ ಯಾರು, ತೋಳ ಯಾರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಸಿದ್ದರಾಮಯ್ಯನವರ ವಿರುದ್ಧ ಬೊಮ್ಮಾಯಿ ಹರಿಹಾಯ್ದಿದ್ದರು.

ವಿವಾದ ತಣ್ಣಗಾಯಿತು ಎನ್ನುವ ಹೊತ್ತಿಗೆ ಧನಿಗೂಡಿಸಿದ್ದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಅವರು, ‘ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಪೊಮೆರೇನಿಯನ್ ನಾಯಿ ಅನ್ನೋಕೆ ಆಗುತ್ತಾ’ ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್‌ – ಬಿಜೆಪಿ ನಡುವೆ ನಡೆಯುತ್ತಿರುವ ನಾಯಿ–ತೋಳ–ಪಮೋರಿಯನ್‌ಗಳ ಚರ್ಚೆಗಳ ಹಿನ್ನೆಲೆಯಲ್ಲಿ ಇಂದು ಟ್ವೀಟ್‌ ಮಾಡಿರುವ ಎಎಪಿ, ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.

‘ನಾಯಿ, ನರಿ ಅಂದುಕೊಂಡೆ ಇರಿ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಒಬ್ಬ ರಾಜಕಾರಣಿ ಆದರೂ ಪ್ರೌಢತೆಯಿಂದ ನಡೆಯುತ್ತಿರುವಿರೆ? ಮೂರು ಬಿಟ್ಟವರು, ರಾಜಕಾರಣಿಗಳಾಗುವರು ಅನ್ನುವಂತೆ ಆಗಿದೆ. ರಾಜಕಾರಣವನ್ನು ಇಷ್ಟು ಕೀಳು ಮಟ್ಟಕ್ಕೆ ಇಳಿಸಿದ ಖ್ಯಾತಿ ನಿಮ್ಮಗಳದ್ದು. ನಿಮಗೆಲ್ಲ ದಮ್ಮು ತಾಕತ್ತು ಇದ್ರೆ ಜನರ ಸಮಸ್ಯೆ ಬಗ್ಗೆ ಮಾತಾಡಿ’ ಎಂದು ಎಎಪಿ ಸವಾಲು ಎಸೆದಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.