ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ದಶಾವರದ ತೆಂಗಿನ ತೋಟದಲ್ಲಿರುವ ತಾಯಿ ರುದ್ರಮ್ಮ ಅವರ ಸಮಾಧಿ ಪಕ್ಕದಲ್ಲೇ ನಟಿ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.
ರಾಜ್ಯ ಸರ್ಕಾರ ನಟಿಯ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಲು ನಿರ್ಧರಿಸಿದೆ. ಸರೋಜಾದೇವಿ ಅವರಿಗೆ ಸೇರಿದ ತೆಂಗಿನ ತೋಟದಲ್ಲಿ ಅಂತಿಮ ಸಿದ್ಧತೆ ನಡೆದಿವೆ.
ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಅಂತ್ಯಕ್ರಿಯೆ ನಡೆಯಲಿರುವ ಸ್ಥಳ ವೀಕ್ಷಿಸಿ, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಸಿದ್ಧತಾ ಕಾರ್ಯ ಕೈಗೊಂಡಿದ್ದಾರೆ.
ನಟಿಯ ಸಾವಿನ ಸುದ್ದಿ ಕೇಳಿ ಹುಟ್ಟೂರು ದಶಾವರದಲ್ಲಿ ನೀರವಮೌನ ಆವರಿಸಿದೆ. ಗ್ರಾಮದ ಅರಳಿಕಟ್ಟೆ ವೃತ್ತದ ಎದುರಿಗಿರುವ ಅವರ ಮನೆ ‘ಬಿ. ಸರೋಜಾದೇವಿ ನಿಲಯ’ದ ಎದುರು ಗ್ರಾಮಸ್ಥರು ಹಾಗೂ ಅಭಿಮಾನಿಗಳು ಜಮಾಯಿಸಿದರು. ಮನೆ ಎದುರು ಅವರ ಫೋಟೊ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಗ್ರಾಮದ ಹಿರಿಯರು ಸರೋಜಾದೇವಿ ಅವರ ನೆನಪುಗಳನ್ನು ಮೆಲುಕು ಹಾಕಿದರು.
‘ನಮ್ಮೂರಿನ ಭೈರಪ್ಪನವರು ಪೊಲೀಸ್ ಇಲಾಖೆಯಲ್ಲಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಆದರೂ ಊರಿನ ಒಡನಾಟವಿತ್ತು. ಚಿಕ್ಕಂದಿನಿಂದಲೂ ಚೂಟಿಯಾಗಿದ್ದ ಸರೋಜಾದೇವಿ ಅವರು ನೃತ್ಯ, ಸಂಗೀತ ಹಾಗೂ ನಾಟಕದಲ್ಲಿ ಆಸಕ್ತಿ ಹೊಂದಿದ್ದರಿಂದ ಚಿತ್ರರಂಗ ಪ್ರವೇಶಿಸಿ ದೊಡ್ಡ ನಟಿಯಾಗಿ ಬೆಳೆದರು. ದೇಶದ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿ ನಮ್ಮೂರಿಗೆ ಕೀರ್ತಿ ತಂದರು’ ಎಂದು ಗ್ರಾಮದ ಹಿರಿಯರು ಹೇಳಿದರು.
‘ದೊಡ್ಡ ನಟಿಯಾಗಿದ್ದರೂ ಸರೋಜಾದೇವಿ ಅವರು ಹುಟ್ಟೂರನ್ನು ಮರೆತಿರಲಿಲ್ಲ. ವರ್ಷಕ್ಕೆ ನಾಲ್ಕೈದು ಸಲ ಬಂದು ಹೋಗುತ್ತಿದ್ದರು. ಪ್ರತಿ ವರ್ಷ ಪಿತೃಪಕ್ಷದ ಸಂದರ್ಭದಲ್ಲಿ ಗ್ರಾಮಕ್ಕೆ ಬಂದು ತಮ್ಮ ಪೂರ್ವಿಕರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುವ ಪರಿಪಾಠ ಬೆಳೆಸಿಕೊಂಡಿದ್ದರು. ಗ್ರಾಮಕ್ಕೆ ಬಂದಾಗಲೆಲ್ಲಾ ತಾವು ಓಡಾಡಿದ ಜಾಗ ಮತ್ತು ತೋಟದಲ್ಲಿ ಸುತ್ತಾಡುತ್ತಿದ್ದರು. ಊರಿನವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು’ ಎಂದು ನೆನೆದರು.
ಶಾಲೆ ಕಟ್ಟಿಸಿ ಕೊಟ್ಟಿದ್ದರು
‘ತಮ್ಮೂರಿನ ಮಕ್ಕಳ ಶಿಕ್ಷಣಕ್ಕೆ ಸರಿಯಾದ ಕಟ್ಟಡ ಇಲ್ಲದಿರುವುದನ್ನು ಕಂಡು ಮರುಗಿದ್ದ ಸರೋಜಾದೇವಿ ಅವರು 1960ರಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡ ನಿರ್ಮಿಸಿ ಕೊಟ್ಟಿದ್ದರು. ಇಂದಿಗೂ ಮಕ್ಕಳು ಆ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರು ಸಹಾಯ ಮಾಡಿರುವುದನ್ನು ಕಟ್ಟಡದಲ್ಲಿ ಬರೆಯಿಸಲಾಗಿದೆ’ ಎಂದು ಗ್ರಾಮದಲ್ಲಿರುವ ಸರೋಜಾದೇವಿ ಅವರ ಮನೆ ಉಸ್ತುವಾರಿ ನೋಡಿಕೊಳ್ಳುವ ಡಿ.ಎಂ. ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಕುಂಚ ಗೌರವ ನಟಿಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಚಿತ್ರ ಕಲಾವಿದ ತೂಬಿನಕೆರೆ ಗೋವಿಂದು ಅವರು ಸರೋಜಾ ದೇವಿ ಅವರ ಮನೆಯ ಕಾಂಪೌಂಡ್‌ನಲ್ಲಿ ಸರೋಜಾ ದೇವಿ ಅವರ ಚಿತ್ರ ಬಿಡಿಸುವ ಜೊತೆಗೆ ಕಿರು ಪರಿಚಯ ನಟಿಸಿದ ಪ್ರಮುಖ ಸಿನಿಮಾಗಳು ಅವರ ಪ್ರೇರಣದಾಯಕ ಮಾತುಗಳನ್ನು ಬರೆಯುವ ಮೂಲಕ ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.