ADVERTISEMENT

ಹಿಜಾಬ್: ಯುವಜನತೆ ಛಿದ್ರವಾದುದನ್ನು ನೋಡಲು ಬೇಸರವಾಗುತ್ತದೆ -ನಟಿ ರಮ್ಯ

ಹಿಜಾಬ್‌–ಕೇಸರಿ ಶಾಲು ಸಂಘರ್ಷಕ್ಕೆ ನಟಿ ರಮ್ಯಾ ಬೇಸರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 1:05 IST
Last Updated 10 ಫೆಬ್ರುವರಿ 2022, 1:05 IST
ರಮ್ಯಾ
ರಮ್ಯಾ   

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳ ಶಾಲಾ–ಕಾಲೇಜುಗಳಲ್ಲಿ ನಡೆದ ಹಿಜಾಬ್‌–ಕೇಸರಿ ಶಾಲು ಸಂಘರ್ಷದ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ನಟಿ, ಮಾಜಿ ಸಂಸದೆ ರಮ್ಯಾ ಅವರು, ‘ಭಾರತದ ಯುವಜನತೆ ಈ ರೀತಿ ಛಿದ್ರವಾಗಿರುವುದನ್ನು ನೋಡಲು ಬೇಸರವಾಗುತ್ತದೆ’ ಎಂದಿದ್ದಾರೆ.

ಈ ಟ್ವೀಟ್‌ ಜೊತೆಗೆ ಹಿಜಾಬ್‌, ಬುರ್ಕಾ ಧರಿಸಿದ್ದ ವಿದ್ಯಾರ್ಥಿನಿಯರ ಎದುರು ಕೇಸರಿ ಶಾಲು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿಡಿಯೊವೊಂದನ್ನು ರಮ್ಯಾ ಅಪ್‌ಲೋಡ್‌ ಮಾಡಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಡಿರುವ ಟ್ವೀಟ್‌ ಅನ್ನು ಬೆಂಬಲಿಸಿ ರಮ್ಯಾ ರಿಟ್ವೀಟ್‌ ಮಾಡಿದ್ದಾರೆ.

‘ಅದು ಒಳವಸ್ತ್ರವೇ ಆಗಿರಲಿ, ಗೂಂಗಟ್‌(ಮುಸುಕು), ಜೀನ್ಸ್‌ ಅಥವಾ ಹಿಜಾಬ್‌ ಆಗಿರಲಿ, ತಾನು ಏನು ಧರಿಸಬೇಕು ಎನ್ನುವುದನ್ನು ನಿರ್ಧರಿಸುವುದು ಆಯಾ ಮಹಿಳೆಯ ಹಕ್ಕು. ಭಾರತೀಯ ಸಂವಿಧಾನವು ಈ ಹಕ್ಕನ್ನು ನೀಡಿದೆ. ಮಹಿಳೆಯ ಮೇಲಿನ ದೌರ್ಜನ್ಯ ನಿಲ್ಲಿಸಿ. #ladkihoonladsaktihoon’ ಎಂಬ ಹ್ಯಾಷ್‌ಟ್ಯಾಗ್‌ನಡಿ ಪ್ರಿಯಾಂಕಾ ಗಾಂಧಿ ವಾದ್ರ ಬುಧವಾರ ಬೆಳಗ್ಗೆ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಜೊತೆಗೆ ‘ಸರ್ಕ್ಯಾಸ್ಟಿಕ್‌ ಶೆಟ್ಟಿ’ ಎಂಬ ಹ್ಯಾಂಡಲ್‌ನ ಪೋಸ್ಟ್‌ ಒಂದನ್ನು ಸ್ಕ್ರೀನ್‌ಶಾಟ್‌ ತೆಗೆದು ರಮ್ಯಾ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.