ADVERTISEMENT

ಅಫ್ಗಾನಿಸ್ತಾನದಿಂದ ತಾಯ್ನಾಡಿಗೆ ಮರಳಿದ ತಂತ್ರಜ್ಞ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 20:55 IST
Last Updated 18 ಆಗಸ್ಟ್ 2021, 20:55 IST
ಮೆಲ್ವಿನ್
ಮೆಲ್ವಿನ್   

ಉಳ್ಳಾಲ: ಅಫ್ಗಾನಿಸ್ತಾನ ತಾಲಿಬಾನ್ ವಶವಾಗುತ್ತಿದಂತೆ ಅಲ್ಲಿರುವ ಭಾರತೀಯರ ರಕ್ಷಣೆಗೆ ಭಾರತೀಯ ವಾಯುಸೇನೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಬೂಲ್‍ನಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದವರಲ್ಲಿ ಉಳ್ಳಾಲದ ಮೆಲ್ವಿನ್ ಒಬ್ಬರಾಗಿದ್ದು, ಬುಧವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಸಿಲುಕಿಕೊಂಡ ಭಾರತೀಯರಲ್ಲಿ ಮಂಗಳೂರು ಮೂಲದವರು ಅನೇಕ ಮಂದಿ ಇದ್ದಾರೆ. ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಮಂಗಳೂರು ಮೂಲದವರನ್ನು ಆಯಾ ಕಂಪನಿಗಳು ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದ್ದು, ಕತಾರ್, ಲಂಡನ್, ನಾರ್ವೆ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಸೀ–17 ಏರೊಸ್ಪೇಸ್ ವಿಮಾನದ ಮೂಲಕ ಆಗಸ್ಟ್ 16ರ ಬೆಳಗಿನ ಜಾವ ಏರ್‌ಲಿಫ್ಟ್ ಮಾಡಿದ್ದು, ಗುಜರಾತ್ ಜಾಮ್‍ನಗರ ಬೇಸ್‍ನಲ್ಲಿ ಲ್ಯಾಂಡಿಂಗ್ ಆದ ಈ ವಿಮಾನದಲ್ಲಿ ಮೆಲ್ವಿನ್ ಪ್ರಯಾಣಿಸಿ, ತಾಯ್ನಾಡಿಗೆ ಬಂದಿದ್ದಾರೆ. ಆ ಬಳಿಕ ನವದೆಹಲಿ ತಲುಪಿ ಉಳ್ಳಾಲದ ಮನೆಗೆ ತಲುಪಿದ್ದಾರೆ. 10 ವರ್ಷಗಳಿಂದ ಕಾಬೂಲ್ ಆಸ್ಪತ್ರೆಯಲ್ಲಿ ತಂತ್ರಜ್ಞರಾಗಿ ಅವರು ಕೆಲಸನಿರ್ವಹಿಸುತ್ತಿದ್ದರು.

ADVERTISEMENT

‘ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೇ ನಮ್ಮ ಆಸ್ಪತ್ರೆ ಇದ್ದುದರಿಂದ ಬರಲು ಸಾಧ್ಯವಾಗಿದೆ. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆ ಆಗುತ್ತಿರುವುದರಿಂದ ಹೆಚ್ಚಿನ ವಿಮಾನಗಳು ರಾತ್ರಿ ಹೊತ್ತಿನಲ್ಲೇ ಲ್ಯಾಂಡಿಂಗ್ಆಗುತಿದ್ದವು. ಎರಡು ದಿನಗಳ ಕಾಲ ವಿಮಾನ ನಿಲ್ದಾಣದಲ್ಲೇ ಅನ್ನ, ಆಹಾರವಿಲ್ಲದೆ ಕಾದು, ಬಳಿಕ ವಿಮಾನವನ್ನು ಹತ್ತಿದ್ದೇವೆ. ಸಿಕ್ಕ ಸಿಕ್ಕ ವಿಮಾನಗಳಲ್ಲಿ ಭಾರತೀಯರನ್ನು ಹತ್ತಿಸಲಾಗಿದೆ. ಇದರಿಂದ ಹಲವರು ಲಂಡನ್, ನಾರ್ವೆ, ದುಬೈ ದೇಶಗಳ ವಿಮಾನಗಳ ಮೂಲಕ ತೆರಳಿ ಅಲ್ಲೇ ಉಳಿದಿದ್ದಾರೆ. ಇವರಲ್ಲಿ ಹಲವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಅನ್ನುವ ವಿಚಾರ ಸಹೋದ್ಯೋಗಿಗಳಿಂದ ತಿಳಿದುಬಂದಿದೆ’ ಎಂದು ಮೆಲ್ವಿನ್ ತಿಳಿಸಿದ್ದಾರೆ.

ಇಕೊಲಾಗ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಮೆಲ್ವಿನ್ ಸಹೋದರ ಕೆಲಸ ಮಾಡುತ್ತಿದ್ದು, ಊರಿಗೆ ಬರಲು ವಿಮಾನ ಇಲ್ಲದೆ ಅಲ್ಲೇ ಸಿಲುಕಿದ್ದಾರೆ. ‘ಎರಡು ಬಾರಿ ವಾಟ್ಸ್‌ಆ್ಯಪ್ ಕರೆ ಮೂಲಕ ಮಾತಾಡಿದ್ದೇವೆ’ ಎಂದು ಮೆಲ್ವಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.