ADVERTISEMENT

ಆಕಾಶ್‌ ಆಸ್ಪತ್ರೆಗೆ ₹ 41.57 ಕೋಟಿ

ಕೋವಿಡ್: ಆಯುಷ್ಮಾನ್ ಭಾರತದಡಿ ಗರಿಷ್ಠ ಮೊತ್ತ ಪಡೆದ ಆಸ್ಪತ್ರೆ

ವರುಣ ಹೆಗಡೆ
Published 21 ಅಕ್ಟೋಬರ್ 2022, 21:21 IST
Last Updated 21 ಅಕ್ಟೋಬರ್ 2022, 21:21 IST
   

ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿ ದೇವನಹಳ್ಳಿಯ ಆಕಾಶ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ₹ 41.57 ಕೋಟಿ ಹಣ ಪಾವತಿಯಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ಈ ಆಸ್ಪತ್ರೆಯು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ರಾಜ್ಯದಲ್ಲೇ ಅತ್ಯಧಿಕ ಮೊತ್ತವನ್ನು ಪಡೆದ ಸಂಸ್ಥೆಯಾಗಿದೆ.

ಕೋವಿಡ್ ಪ್ರಥಮ ಪ್ರಕರಣ ವರದಿಯಾಗುತ್ತಿದ್ದಂತೆ ಸೋಂಕು ಶಂಕಿತರು ಹಾಗೂ ಸಂಪರ್ಕಿತರಿಗೆ ಪ್ರತ್ಯೇಕ ವಾಸಕ್ಕೆ ಸರ್ಕಾರವು ಇಲ್ಲಿ ವ್ಯವಸ್ಥೆ ಮಾಡಿತ್ತು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ 825 ಹಾಸಿಗೆಗಳ ಸಂಸ್ಥೆಯಲ್ಲಿ, ಮೊದಲು 200ಕ್ಕೂ ಅಧಿಕ ಹಾಸಿಗೆಗ
ಳನ್ನು ಚಿಕಿತ್ಸೆಗೆ ಗುರುತಿಸಲಾಗಿತ್ತು. ಸರ್ಕಾರ ಶಿಫಾರಸು ಆಧಾರದಲ್ಲಿ ಹಣ ಪಾವತಿಸುವ ಬಗ್ಗೆ ಆದೇಶ ಹೊರಡಿಸಿತ್ತು. ಪ್ರಕರಣ ಏರಿಕೆ ಕಂಡ ಬಳಿಕ, ಅಲ್ಲಿನ ಎಲ್ಲ 825 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿ, ಸರ್ಕಾರಿ ಆಸ್ಪತ್ರೆಗಳಿಗೆ ಬಂದವರನ್ನು ಶಿಫಾರಸು
ಆಧಾರದಲ್ಲಿಅಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ವಿದೇಶಿಗಳಿಂದ ಬಂದು ಸೋಂಕಿತರಾದ ಹೆಚ್ಚಿನವರಿಗೆ ಅಲ್ಲಿಯೇ ಚಿಕಿತ್ಸೆ ಒದಗಿಸಲಾಗಿದೆ. ಕೆಲವರು ನೇರವಾಗಿ ದಾಖಲಾಗಿಯೂ ಕೋವಿಡ್ ಚಿಕಿತ್ಸೆ ಪಡೆದಿದ್ದಾರೆ.

ADVERTISEMENT

ನೋಟಿಸ್ ಜಾರಿ:ಕೋವಿಡ್ ಪೀಡಿತರು ಚೇತರಿಸಿಕೊಂಡರೂ ಆಸ್ಪತ್ರೆಯಿಂದ ಮನೆಗೆ ಕಳುಹಿಸುತ್ತಿಲ್ಲ ಎಂದು ಈ ಹಿಂದೆ ಕೆಲವರು ಆಕಾಶ್ ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದರು. ಅದೇ ರೀತಿ, ಸರ್ಕಾರದಿಂದ ಹಣ ಪಡೆಯುವ ಜತೆಗೆ ರೋಗಿಗಳ ಕಡೆಯವರಿಂದಲೂ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆ ವಸೂಲಿ ಮಾಡಿದೆ ಎಂದು ರೋಗಿಗಳ ಕುಟುಂಬಸ್ಥರು ಆರೋಗ್ಯ ಇಲಾಖೆಗೆ ದೂರು ನೀಡಿ
ದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಗೆ ದಾಖಲೆ ಲಭ್ಯವಾಗಿದ್ದು, ಇಲಾಖೆಯು ಕಾರಣ ಕೇಳಿ ಆಸ್ಪತ್ರೆಗೆ ನೋಟಿಸ್ ನೀಡಿದೆ.

ಆಸ್ಪತ್ರೆಗೆ ಪ‍್ರಭಾವಿ ಸಚಿವರ ನಂಟು?

ಆಕಾಶ್ ಆಸ್ಪತ್ರೆಯು ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ್ದಾಗಿದ್ದು, ಹೆಚ್ಚಿನ ಮೊತ್ತದ ಪಾವತಿಯ ಹಿಂದೆ ಈ ಅಂಶವೂ ಕೆಲಸ ಮಾಡಿದೆ ಎಂದೂ ಹೇಳಲಾಗುತ್ತಿದೆ.

‘ವಿಮಾನ ನಿಲ್ದಾಣದ ಸಮೀಪ ಇರುವ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ಅದರ ಸ್ಥಿರಾಸ್ತಿ ಸಮೇತ ಸಚಿವರು ಖರೀದಿಸಿದ್ದಾರೆ. ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ದಾಖಲೆಗಳಲ್ಲಿ ಸಚಿವರ ಒಡೆತನದ ಹೆಸರಿಲ್ಲ. ಆದರೆ, ಆಸ್ಪತ್ರೆಯ ಪೂರ್ಣ ಉಸ್ತುವಾರಿ ಸಚಿವರ ಹಿಡಿತದಲ್ಲಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿ
ಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.