
ಡಿಕೆಶಿ
ಬೆಂಗಳೂರು: ‘ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದೆಂದು ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಪತ್ರ ಬರೆದಿದೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಈ ಹಿಂದೆ ಆಗಿರುವ ಆದೇಶದಂತೆ ನಡೆದುಕೊಳ್ಳಬೇಕು’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರಿಯಲ್ಲ’ ಎಂದರು.
‘ಮಾರ್ಚ್ 10ರಿಂದ ಲೋಕಸಭೆ ಕಲಾಪ ಆರಂಭವಾಗಲಿದ್ದು, ರಾಜ್ಯದ ಸಂಸದರು ಈ ವಿಚಾರವಾಗಿ ಪ್ರಧಾನಿ ಹಾಗೂ ಜಲಶಕ್ತಿ ಸಚಿವರ ಮೇಲೆ ಒತ್ತಡ ಹೇರಬೇಕು. ಬಜೆಟ್ ಅಧಿವೇಶನದ ಮಧ್ಯೆಯೇ ದೆಹಲಿಗೆ ಹೋಗಿ ಕೇಂದ್ರದ ಸಚಿವರನ್ನು ನಾನು ಭೇಟಿ ಮಾಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೂ ತರುತ್ತೇನೆ. ನಾವು ಸುಮ್ಮನೆ ಕುಳಿತುಕೊಂಡರೆ ರಾಜ್ಯದ ಹಿತಕ್ಕೆ ಧಕ್ಕೆ ಆಗಲಿದೆ’ ಎಂದರು.
‘ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೀಗೇಕೆ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ತುಂಗಭದ್ರಾ ವಿಚಾರವಾಗಿಯೂ ಅವರು ಮಾತುಕತೆಗೆ ಬರುತ್ತಿಲ್ಲ. 30 ಟಿಎಂಸಿ ಅಡಿಯಷ್ಟು ತುಂಗಭದ್ರಾ ನದಿ ನೀರು ನಮಗೆ ನಷ್ಟವಾಗುತ್ತಿದೆ. ಅದನ್ನು ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎಂದರು.
‘ಭೂಸ್ವಾಧೀನಕ್ಕೆ ₹ 70 ಸಾವಿರ ಕೋಟಿ ಖರ್ಚಾಗಲಿದೆ. ಅದಕ್ಕಾಗಿ ಮೂರು ಹಂತಗಳಲ್ಲಿ ಪ್ರತಿವರ್ಷ ₹ 20 ಸಾವಿರ ಕೋಟಿ ಮೀಸಲಿಟ್ಟು ಯೋಜನೆ ಪೂರ್ಣಗೊಳಿಸಲು ತೀರ್ಮಾನಿಸಿದ್ದೆವು. ಬಜೆಟ್‌ನಲ್ಲಿಯೂ ಹಣ ಮೀಸಲಿಡಲು ಯೋಚಿಸಿದ್ದೇವೆ. ಆದರೆ, ಯೋಜನೆ ಅನುಷ್ಠಾನಗೊಳಿಸಲು ಮಹಾರಾಷ್ಟ್ರ, ಆಂಧ್ರ ಪ್ರದೇಶ ಬಿಡುತ್ತಿಲ್ಲ. ನಾವು ನಮ್ಮ ಜಾಗದಲ್ಲಿ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಉದಯಪುರ ಜಲಶಕ್ತಿ ಸಮಾವೇಶದಲ್ಲಿ ಮೂರೂ ರಾಜ್ಯಗಳ ಸಚಿವರು ಸೇರಿದ್ದೆವು. ಆದರೆ, ಆಂಧ್ರ ಪ್ರದೇಶದ ಸಚಿವರು ಮುಖ್ಯಮಂತ್ರಿಯ ಜೊತೆ ಚರ್ಚಿಸದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಈ ಹಿಂದೆ ಆದೇಶ ಬಂದಾಗ, ನಮ್ಮ ರಾಜ್ಯದವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇ ತಪ್ಪಾಯಿತು. ಅಂದು ಈ ತೀರ್ಮಾನವನ್ನು ಯಾರು ಮಾಡಿದರೊ ಗೊತ್ತಿಲ್ಲ. ನ್ಯಾಯಲಯಕ್ಕೆ ಹೋದರೆ ನಾವೇ ನಮ್ಮ ಕೈಯನ್ನು ಮೊಸಳೆ ಬಾಯಿಗೆ ನೀಡಿದಂತೆ’ ಎಂದರು.
‘ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವ ಯೋಜನೆ ಇದೆಯೇ’ ಎಂಬ ಪ್ರಶ್ನೆಗೆ, ‘ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇದರ ಪರಿಹಾರಕ್ಕೆ ಸರ್ವಪಕ್ಷ ನಿಯೋಗವನ್ನೇ ಕರೆದುಕೊಂಡು ಹೋಗಬೇಕು’ ಎಂದರು.
ಈ ವಿಚಾರದಲ್ಲಿ ದೇವೇಗೌಡರ ಸಲಹೆ ಪಡೆಯಬಹುದಲ್ಲವೇ ಎಂದಾಗ, ‘ಅವರ ಆರೋಗ್ಯ ಸರಿಯಿಲ್ಲ. ಅದನ್ನು ಕಾಪಾಡಿಕೊಳ್ಳಬೇಕು. ಅವರ ಕಡೆ ಹೋರಾಟ ಏನು ಮಾಡಬೇಕೊ ಮಾಡಲಿ’ ಎಂದರು.