ಬೆಂಗಳೂರು: ರಾಜ್ಯದಲ್ಲಿ ‘108 ಆರೋಗ್ಯ ಕವಚ’ ಯೋಜನೆಯಡಿ ಆರೋಗ್ಯ ಇಲಾಖೆಯೇ ಆಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡಲಿದ್ದು, ‘ಕಮಾಂಡ್ ಕಂಟ್ರೋಲ್’ ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರೆತಿದೆ.
ಈ ಬಗ್ಗೆ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿನ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ‘108 ಆರೋಗ್ಯ ಕವಚ’ ಯೋಜನೆಯಡಿ ಜಿವಿಕೆ–ಇಎಂಆರ್‌ಐ ಸಂಸ್ಥೆ ಜತೆಗಿನ ಒಡಂಬಡಿಕೆ ಹಿಂಪಡೆಯಲಾಗಿದೆ. ಇಲಾಖೆಯಿಂದಲೇ ಆಂಬುಲೆನ್ಸ್ ನಿರ್ವಹಿಸಲು ‘112 ಎನ್‌ಜಿ ಇಆರ್‌ಎಸ್’ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತದೆ. ‘ಕಮಾಂಡ್ ಕಂಟ್ರೋಲ್’ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮೂಲಕ ಆಂಬುಲೆನ್ಸ್‌ಗಳ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಸರ್ಕಾರದ ಅಧೀನಕ್ಕೆ ಪಡೆದು ನಿರ್ವಹಿಸುವ ಉದ್ದೇಶದಿಂದ, ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ₹ 6.09 ಕೋಟಿಯಲ್ಲಿ ಅಗತ್ಯ ಉಪಕರಣಗಳ ಖರೀದಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆಯಡಿ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.