ADVERTISEMENT

ಆರಗ ಜ್ಞಾನೇಂದ್ರಗೆ ಗೃಹ ಖಾತೆ; ಒಲಿಯಿತು ಬಂಗಾರಪ್ಪ ಯೋಗ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 12:39 IST
Last Updated 7 ಆಗಸ್ಟ್ 2021, 12:39 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ಮೂರು ದಶಕಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಸಚಿವರಾಗುವ ಅವಕಾಶ ಪಡೆದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಗೃಹ ಖಾತೆ ಸಿಕ್ಕಿರುವುದು ಜಿಲ್ಲೆಯ ಜನರ ಸಂಭ್ರಮ ಇಮ್ಮಡಿಗೊಳಿಸಿದೆ. ಜತೆಗೆ ಜಿಲ್ಲೆಯ ಇತಿಹಾಸ ಮರುಕಳಿಸಿದೆ.

ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕರಾಗಿದ್ದ ಎಸ್‌.ಬಂಗಾರಪ್ಪ ಅವರು ದೇವರಾಜ ಅರಸು ಅವರ ಸಂಪುಟದಲ್ಲಿ ಮೊದಲ ಬಾರಿ ಸಚಿವರಾದಾಗಲೂ ಗೃಹಖಾತೆಯ ಜವಾಬ್ದಾರಿ ನಿಭಾಯಿಸಿದ್ದರು. ಈಗ ಅಂತಹ ಯೋಗ ಆರಗ ಅವರಿಗೂ ಒಲಿದು ಬಂದಿದೆ.

ಬೆಂಗಳೂರಿನಲ್ಲಿ ಖಾತೆಗಳ ಹಂಚಿಕೆ ವಿಷಯ ಪ್ರಕಟವಾಗುತ್ತಿದ್ದಂತೆ ತೀರ್ಥಹಳ್ಳಿ ಕ್ಷೇತ್ರದ ಜನರು ಹಳ್ಳಿಹಳ್ಳಿಗಳಲ್ಲೂ ಬೀದಿಗಿಳಿದು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಸಹಿ ಹಂಚಿ ಸಂತಸ ಹಂಚಿಕೊಂಡರು.

ADVERTISEMENT

‘ರಾಜ್ಯದ ಕಾನೂನು, ಸುವ್ಯವಸ್ಥೆ ಕಾಪಾಡುವ ಮಹತ್ವದ ಖಾತೆ ನಿರೀಕ್ಷಿಸಿರಲಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ ಎಂದಿದ್ದೆ. ನಾನು ಆರ್‌ಎಸ್‌ಎಸ್‌ನಲ್ಲಿ ಬೆಳೆದವನು. ಸಂಘಟನೆ ಶಿಸ್ತು ಕಲಿಸಿದೆ. ಅರ್ಹತೆ ದೊರಕಿಸಿಕೊಟ್ಟಿದೆ. ಗೃಹ ಖಾತೆ ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುವೆ’ ಎಂದು ಪ್ರತಿಕ್ರಿಯಿಸಿದರು.

‘ಶಾಸಕರ ಪ್ರತಿಭೆ, ಆಸಕ್ತಿಗೆ ತಕ್ಕಂತೆ ಮುಖ್ಯಮಂತ್ರಿ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಹಿರಿಯರು, ಕಿರಿಯರ ಸಮತೋಲನ ಸಂಪುಟ ರಚಿಸಿದ್ದಾರೆ. ತಮಗೆ ಮತ್ತೆ ಗ್ರಾಮೀಣಾಭಿವೃದ್ಧಿ ಖಾತೆ ದೊರೆತಿರುವುದು ಸಂತಸ ತಂದಿದೆ. ಆರಗ ಗೃಹ ಸಚಿವರಾಗಿರುವುದು ಜಿಲ್ಲೆಗೆ ಬಲ ತಂದಿದೆ. ಅವಕಾಶವನ್ನು ಎಲ್ಲ ಸಚಿವರೂ ಜನರ ಸೇವೆಗೆ ಬಳಸಿಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.