ಎಐ
ಬೆಂಗಳೂರು: ಕೃಷಿಯನ್ನು ಲಾಭದಾಯಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಿ, ಇಳುವರಿ ಹೆಚ್ಚಳಕ್ಕೆ ನೆರವಾಗಲು ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ ಆಧಾರಿತ ಕೃಷಿ ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.
ಆಯಾ ಪ್ರದೇಶದ ಭೂ ವೈವಿಧ್ಯ, ಹವಾಗುಣ, ಮಣ್ಣಿನ ಮಾದರಿ, ತೇವಾಂಶ, ಮಳೆಯ ಪ್ರಮಾಣ, ಪ್ರಸ್ತುತ ಇರುವ ಬೆಳೆ ಪದ್ಧತಿ, ಪಡೆಯುತ್ತಿರುವ ಇಳುವರಿಗಳನ್ನು ಲೆಕ್ಕಹಾಕಿ ಜಾಗತಿಕ ಭೂ ನಕ್ಷೆ, ಕೇಂದ್ರೀಕೃತ ಡಿಜಿಟಲ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಇವುಗಳ ದತ್ತಾಂಶ ಬಳಸಿಕೊಂಡು ಕೃತಕ ಬುದ್ಧಿಮತ್ತೆ, ಯಾಂತ್ರಿಕ ಅಧ್ಯಯನ ತಂತ್ರಜ್ಞಾನದ ಆಧಾರದಲ್ಲಿ ರಾಜ್ಯದ ರೈತರು ಹಾಗೂ ಕೃಷಿ ನೀತಿ ನಿರೂಪಕರಿಗೆ ನೆರವು ನೀಡುವ ಸರ್ಕಾರ ಕಾರ್ಯಕ್ರಮ ರೂಪಿಸಿದೆ.
ಆಯಾ ವರ್ಷದ ಹವಾಮಾನ, ಮಳೆ, ಅತಿವೃಷ್ಟಿ, ಅನಾವೃಷ್ಟಿಯ ಆಧಾರದಲ್ಲಿ ಯಾವ ಋತುವಿನಲ್ಲಿ ಯಾವ ಬೆಳೆಗಳಿಗೆ ಬೇಡಿಕೆ ಇರುತ್ತದೆ. ಯಾವ ದೇಶದಲ್ಲಿ ಯಾವ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ. ಅಲ್ಲಿನ ಹವಾಮಾನ ಸ್ಥಿತಿ ಹೇಗಿದೆ? ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ಯಾವ ಪ್ರದೇಶಗಳಲ್ಲಿ ಬೆಳೆಯುವ ಬೆಳೆ ನಷ್ಟವಾಗಬಹುದು. ಯಾವ ಬೆಳೆಗಳಿಗೆ ದಿಢೀರ್ ಬೇಡಿಕೆ ಬರಬಹುದು. ಯಾವ ಬೆಳೆಗಳಿಂದ ಉತ್ತಮ ಬೆಲೆ ಸಿಗಬಹುದು ಎನ್ನುವುದರ ಆಧಾರದಲ್ಲಿ ಆಯಾ ಪ್ರದೇಶದ ರೈತರು ಯಾವ ಆಹಾರ–ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು ಎನ್ನುವ ಬೆಳೆ ಹಂಚಿಕೆಯ ಖಚಿತ ಮಾಹಿತಿಯನ್ನು ಈ ಕೃಷಿ ಸೇವಾ ಕೇಂದ್ರಗಳು ಒದಗಿಸಲಿವೆ.
ಮಡಗಾಸ್ಕರ್, ಇಂಡೊನೇಷ್ಯಾ, ಚೀನಾ, ಮೆಕ್ಸಿಕೊ ಮೊದಲಾದ ದೇಶಗಳು ವೆನಿಲಾ ಬೆಳೆಗೆ ಪ್ರಸಿದ್ಧಿ ಪಡೆದಿವೆ. ಕೆಲ ವರ್ಷಗಳ ಹಿಂದೆ ಅಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳಿಂದ ವೆನಿಲಾ ಬೆಲೆ ಗಗನಕ್ಕೇರಿತ್ತು.
ರೈತರು ಆಗ ಎಲ್ಲೆಡೆ ವೆನಿಲಾ ಬೆಳೆಯಲು ಆರಂಭಿಸಿದರು. ಫಸಲು ಬರುವ ವೇಳೆಗೆ ಬೆಲೆ ಕುಸಿದಿತ್ತು. ಇದರಿಂದ ರಾಜ್ಯದ ರೈತರು ಭಾರಿ ನಷ್ಟ ಅನುಭವಿಸಿದ್ದರು. ನೆಟ್ಟಿದ್ದ ಎಲ್ಲ ಬಳ್ಳಿಗಳನ್ನು ಕಿತ್ತು ಹಾಕಿದ್ದರು. ಇಂಥ ಸಮಸ್ಯೆಗಳಿಗೆ ಸಂಪೂರ್ಣ ತಡೆ ಬೀಳಲಿದೆ. ‘ದಿಢೀರ್ ಬೆಲೆ ಏರಿಕೆಯಾಗುವ ಬೆಳೆಗಳನ್ನು ರೈತರು ಸಮೂಹ ಸನ್ನಿಗೆ ಒಳಗಾದವರಂತೆ ಬೆಳೆಯಲು ಮುಂದಾಗುವುದನ್ನು ಕೃತಕ ಬುದ್ಧಿಮತ್ತೆ ಆಧಾರಿತ ಕೃಷಿ ಸೇವಾ ಕೇಂದ್ರಗಳು ತಡೆಯಲಿವೆ. ಇಲ್ಲವೇ, ದೀರ್ಘ ಸಮಯದವರೆಗೆ ಬೆಲೆ ಸ್ಥಿರತೆಯ ಮಾಹಿತಿ ಆಧಾರದಲ್ಲಿ ಬೆಳೆಗಳನ್ನು ಶಿಫಾರಸು ಮಾಡಲಿವೆ. ರಾಜ್ಯದಲ್ಲಿ ಅತಿ ಹೆಚ್ಚು ವಿಸ್ತರಿಸುತ್ತಿರುವ ಅಡಿಕೆ ಕ್ಷೇತ್ರದ ಭವಿಷ್ಯ, ಬೆಲೆ ಏರಿಳಿತ ಸೇರಿ ಎಲ್ಲ ಗೊಂದಲಗಳಿಗೂ ಈ ಕೇಂದ್ರ ಮಾರ್ಗ ತೋರಲಿವೆ’ ಎನ್ನುತ್ತಾರೆ ಕೃಷಿ ತಜ್ಞ ಎಚ್.ಬಿ. ರಾಜಶೇಖರ್.
ರಾಜ್ಯಮಟ್ಟದ ತಜ್ಞರ ಸಮಿತಿ ರಚನೆ
ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು, ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಧಿಕ ಲಾಭ ತರುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ನೆರವಾಗಲು ರಾಜ್ಯಮಟ್ಟದ ತಂತ್ರಜ್ಞರ ಸಮಿತಿ ರಚಿಸಲಾಗಿದೆ.
2025–26ನೇ ಸಾಲಿನ ಋತುಗಳಲ್ಲಿ ಭತ್ತದ ಬೆಳೆಯಲ್ಲಿ ತಂತ್ರಜ್ಞಾನದ ಮಾದರಿಯನ್ನು (ಎಸ್–ಟೆಕ್) ಅಳವಡಿಸಲು ಬಳ್ಳಾರಿ, ದಾವಣಗೆರೆ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ಸಹಭಾಗಿ ಸಂಸ್ಥೆಗಳು
*ಕೃಷಿ ಇಲಾಖೆ l ಸಿಬ್ಬಂದಿ ಮತ್ತು ಆಡಳಿತ
*ಸುಧಾರಣಾ ಇಲಾಖೆ l ಪ್ರಾದೇಶಿಕ ದೂರ ಸಂವೇದಿ ಕೇಂದ್ರ
*ಕೃಷಿ ವಿಶ್ವವಿದ್ಯಾಲಯಗಳು
*ಕರ್ನಾಟಕ ದೂರ ಸಂವೇದಿಅನ್ವಯಿಕ ಕೇಂದ್ರ
*ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ
*ಆರ್ಥಿಕ ಮತ್ತು ಅಂಕಿಂಶಗಳ ಇಲಾಖೆ
*ಜಲಾನಯನ ಅಭಿವೃದ್ಧಿ ಇಲಾಖೆ
*ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಕೀಟ, ರೋಗಗಳ ನಿವಾರಣೆ
ಇ–ಸ್ಯಾಪ್ ತಂತ್ರಾಂಶ (ಎಲೆಕ್ಟ್ರಾನಿಕ್ಸ್ ಪರಿಹಾರ) ಬಳಸಿ 52 ಕೃಷಿ ಬೆಳೆಗಳಲ್ಲಿ ಕಂಡು ಬರುವ 1,000ಕ್ಕೂ ಹೆಚ್ಚು ಕೀಟ, ರೋಗಗಳನ್ನು ನಿವಾರಣೆ ಮಾಡುವ ಕಾರ್ಯಕ್ಕೆ ಕೃಷಿ ಇಲಾಖೆ ಚಾಲನೆ ನೀಡಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ಇ–ಸ್ಯಾಪ್ ತಂತ್ರಾಂಶ ಕೀಟ ರೋಗಗಳ ನಿವಾರಣೆಯ ಜತೆಗೆ, ಪೋಷಕಾಂಶಗಳ ಕೊರತೆಯನ್ನು ನೀಗಿಸಲು ನೆರವಾಗುತ್ತದೆ. ರೋಗದ ತೀವ್ರತೆ, ಹವಾಮಾನ ಪರಿಸ್ಥಿತಿ, ಬೆಳೆಯ ಆರ್ಥಿಕ ಪ್ರಾಮುಖ್ಯದ ಆಧಾರದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಮಾಹಿತಿಯನ್ನು ರೈತರಿಗೆ ಒದಗಿಸಲಾಗುತ್ತದೆ.
ಈ ತಂತ್ರಜ್ಞಾನದಿಂದಾಗಿ ಕೀಟಗಳ ನಾಶಕ್ಕೆ ಅನಗತ್ಯ ರಾಸಾಯನಿಕ, ಕೀಟನಾಶಗಳ ಬಳಕೆ ತಗ್ಗಿಸಬಹುದು. ಇದುವರೆಗೆ 1.76 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಕೃಷಿ ಇಲಾಖೆ ಹೇಳಿದೆ.
ರಾಜ್ಯ ಸರ್ಕಾರ ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್ ಸೇವಾ ಕೇಂದ್ರಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿವೆ. ಭವಿಷ್ಯದಲ್ಲಿ ರೈತರಿಗೆ ವರದಾನವಾಗಲಿವೆಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.