ಬೆಂಗಳೂರು: ‘ಕ್ವಿನ್ ಸಿಟಿ’ ಹೆಸರಲ್ಲಿ ದೇಶ, ವಿದೇಶಗಳ ವಿಶ್ವವಿದ್ಯಾಲಯಗಳಿಗೆ ರತ್ನಗಂಬಳಿ ಹಾಸುತ್ತಿರುವ ರಾಜ್ಯ ಸರ್ಕಾರ, ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ವರವಾಗಿರುವ ಸರ್ಕಾರ ಸ್ಥಾಪಿಸಿದ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಮಹಾರಾಣಿ ಕ್ಲಸ್ಟರ್, ಮಂಡ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಅವಕಾಶ ನೀಡಿದ್ದೇ ಕೇಂದ್ರದ ಯುಪಿಎ ಸರ್ಕಾರ. ನೃಪತುಂಗ ವಿಶ್ವವಿದ್ಯಾಲಯ ಸೇರಿ ಮೂರೂ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ₹50 ಕೋಟಿ, ನಂತರ ₹20 ಕೋಟಿ ನೀಡಿದೆ. ಈ ಹಣ ಬಳಕೆ ಮಾಡಿಕೊಂಡಿರುವ, ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸಂಯೋಜಿತವಾದ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹೊಸ ವಿಶ್ವವಿದ್ಯಾಲಯಗಳನ್ನು ರಚಿಸಿದ್ದರಿಂದ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹಿಂದೆ ಇದ್ದ ವಿಶ್ವವಿದ್ಯಾಲಯದ ಜಾಗ, ಅಧಿಕಾರಿ, ಸಿಬ್ಬಂದಿಯನ್ನೇ ಬಳಸಿಕೊಂಡು ಕೆಲಸ ಮಾಡಿವೆ. ಸರ್ಕಾರಕ್ಕೆ ಆರ್ಥಿಕ ಹೊರೆಯಾಗದೆ, ಸ್ಥಳೀಯ ಸಂಪನ್ಮೂಲಗಳಿಂದಲೇ ಸುಗಮ ಕಾರ್ಯನಿರ್ವಹಣೆ ಮಾಡಿವೆ. ಮಹಾರಾಣಿ ಕ್ಲಸ್ಟರ್, ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಇದಕ್ಕೆ ಪುರಾವೆ ಎಂದರು.
ಒಂದೆರಡು ವಿಶ್ವವಿದ್ಯಾಲಯಗಳು ಸಮಸ್ಯೆ ಎದುರಿಸಿರಬಹುದು. ಅವುಗಳಿಗೆ ಸ್ವಲ್ಪ ನೆರವು ನೀಡಿದರೂ ಚೇತರಿಸಿಕೊಳ್ಳುತ್ತವೆ. ಪ್ರತಿ ವಿಶ್ವವಿದ್ಯಾನಿಲಯಕ್ಕೆ ₹342 ಕೋಟಿ ಬೇಕು ಎಂದು ಸರ್ಕಾರ ಹೇಳಿದೆ. ಈ ಕುರಿತು ತಜ್ಞರ ಸಮಿತಿಯ ವರದಿ ಇದ್ದರೆ ಬಹಿರಂಗಪಡಿಸಲಿ. ಈ ಕುರಿತು ಸದನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ರದ್ದು ಮಾಡಿದರೆ ಪುನರ್ ಸ್ಥಾಪನೆ
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಆಗ 9 ವಿಶ್ವವಿದ್ಯಾಲಯಗಳನ್ನು ಪುನರ್ ಆರಂಭಿಸುವ ಜತೆಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಲಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು. ರಾಜ್ಯ ಸರ್ಕಾರದ ನಿರ್ಧಾರದಿಂದ ಉನ್ನತ ಶಿಕ್ಷಣದ ಪ್ರಗತಿಗೆ ಅಡ್ಡಿಯಾಗುತ್ತದೆ. ಕಾನೂನಾತ್ಮಕವಾಗಿಯೂ ಇದು ಸರಿಯಾದ ಕ್ರಮವಲ್ಲ. ವಿಶ್ವವಿದ್ಯಾಲಯ ಸ್ಥಾಪಿಸುವುದೇ ತಪ್ಪು ಎಂಬ ಸಂದೇಶ ನೀಡಿದಂತೆ ಆಗುತ್ತದೆ. ಮುಂದೆ ಬೇಕು ಎನಿಸಿದಾಗ ಮತ್ತೆ ಸ್ಥಾಪನೆ ಮಾಡುವುದು ಕಷ್ಟವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.