ADVERTISEMENT

ವಿಧಾನಸಭೆ ಉಪಚುನಾವಣೆ: ವಲಸಿಗರಿಗೆ ಕಾಂಗ್ರೆಸ್, ಜೆಡಿಎಸ್‌ ಮಣೆ‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 3:41 IST
Last Updated 19 ಮಾರ್ಚ್ 2021, 3:41 IST
ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು
ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು   

ನವದೆಹಲಿ/ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿ ಘೋಷಿಸುವ ಮೊದಲೇ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್, ಒಂದು ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಗಳ ಹೆಸರು ಘೋಷಿಸುವ ಮೂಲಕ ಉಪಚುನಾವಣೆಯ ಅಖಾಡಕ್ಕೆ ಧುಮುಕಿವೆ.

ಮಸ್ಕಿ ಮತ್ತು ಸಿಂದಗಿ ಕ್ಷೇತ್ರದಲ್ಲಿ ಕ್ರಮವಾಗಿ ಬಿಜೆಪಿ, ಜೆಡಿಎಸ್‌ನಿಂದ ವಲಸೆ ಬಂದ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್ ನೀಡಿದ್ದರೆ, 15 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು ಗುರುವಾರವಷ್ಟೇ ಪಕ್ಷ ಸೇರಿದ್ದವರಿಗೆ ಜೆಡಿಎಸ್‌ ಟಿಕೆಟ್ ಕೊಟ್ಟಿದೆ.

ಚುನಾವಣೆ ದಿನಾಂಕ ಪ್ರಕಟವಾದ ಕೂಡಲೇ ಅಭ್ಯರ್ಥಿ ಪಟ್ಟಿ ಘೋಷಿಸಿ, ಆರಂಭದಿಂದಲೇ ಸಿದ್ಧತೆ ನಡೆಸುವ ಕೆಲಸವನ್ನು ಸಾಮಾನ್ಯವಾಗಿ ಬಿಜೆಪಿ ಮಾಡುತ್ತಿತ್ತು. ಈಗ, ಕಾಂಗ್ರೆಸ್ ಈ ಕೆಲಸ ಮಾಡಿದೆ.

ADVERTISEMENT

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌, ಶನಿವಾರ ಬೆಂಗಳೂರಿಗೆ ಬರಲಿದ್ದು, ಆ ಬಳಿಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಲಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಪಕ್ಷ ಸೇರಿದ್ದ ಬಸವನಗೌಡ ತುರವೀಹಾಳ ಅವರನ್ನು ಮಸ್ಕಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪಗೌಡ ಪಾಟೀಲ (ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ) ವಿರುದ್ಧ ಬಿಜೆಪಿಯಿಂದ ಸ್ಫರ್ಧಿಸಿದ್ದ ಬಸವನಗೌಡ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಏಪ್ರಿಲ್‌ 17ರಂದು ಮತದಾನ ನಡೆಯಲಿದೆ. ಚುನಾವಣೆ ದಿನಾಂಕ ಘೋಷಣೆಯಾಗದ ಸಿಂದಗಿ ಕ್ಷೇತ್ರಕ್ಕೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸಿದೆ. ಅಶೋಕ ಮನಗೂಳಿ ಅವರು ಕಣಕ್ಕಿಳಿಯಲಿದ್ದಾರೆ.

ಜೆಡಿಎಸ್‌ನಿಂದ ಖಾದ್ರಿ: ಬಸವ ಕಲ್ಯಾಣ ಕ್ಷೇತ್ರದ ಅಭ್ಯರ್ಥಿಯಾಗಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರನ್ನು ಕಣಕ್ಕೆ ಇಳಿಸುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಉಪಚುನಾವಣೆಯನ್ನು ನಾವು ಲಘುವಾಗಿ ಪರಿಗಣಿಸಿಲ್ಲ. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ’ ಎಂದು ಹೇಳಿದರು.

‘ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಕೂಡಲೇ, ಬಿಜೆಪಿಗೆ ಅನುಕೂಲವಾಗುವಂತೆ ಜೆಡಿಎಸ್‌ ನಡೆದುಕೊಂಡಿದೆ ಎಂದು ಕಾಂಗ್ರೆಸ್‌ ನಾಯಕರು ನಾಳೆಯಿಂದಲೇ ಟೀಕೆ ಆರಂಭಿಸುತ್ತಾರೆ.ಎರಡೂ ರಾಷ್ಟ್ರೀಯ ಪಕ್ಷಗಳ ಜತೆಗೂ ಸಮಾನ ಅಂತರ ಕಾಯ್ದುಕೊಂಡು ಗೆಲ್ಲಲೇಬೇಕೆಂದು ಕೊನೆಯವರೆಗೂ ಪ್ರಯತ್ನ ಮಾಡುತ್ತೇವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.